ಮುಂಬೈ (ಮಹಾರಾಷ್ಟ್ರ): ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ನ್ಯಾಯಾಂಗ ಬಂಧನವನ್ನು ಡಿಸೆಂಬರ್ 13ರ ವರೆಗೆ ವಿಸ್ತರಿಸಲಾಗಿದ್ದು, ಇಂದು ಚಾಂದಿವಾಲ್ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಏನಿದು ಚಾಂದಿವಾಲ್ ಆಯೋಗ?
ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಮಾಡಿರುವ ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಕೈಲಾಶ್ ಉತ್ತಮ್‌ಚಂದ್ ಚಾಂಡಿವಾಲ್ ಅವರ ನೇತೃತ್ವದಲ್ಲಿ ಏಕ ಸದಸ್ಯ ತನಿಖಾ ಸಮಿತಿಯನ್ನು ರಚಿಸಿತ್ತು.
ಈ ಆಯೋಗವು ಈಗಾಗಲೇ ಪರಮ್ ಬೀರ್ ಸಿಂಗ್, ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಮತ್ತು ದೇಶಮುಖ್ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಪಲಾಂಡೆ ಅವರ ವಿಚಾರಣೆ ನಡೆಸಿದೆ. ನಿನ್ನೆ ಪರಮ್ ಬೀರ್ ಸಿಂಗ್ರ ವಿಚಾರಣೆ ನಡೆಸಿದ್ದ ಆಯೋಗ ಅವರ ವಿರುದ್ಧ ಇದ್ದ ಜಾಮೀನು ಸಹಿತ ವಾರಂಟ್ ರದ್ದುಗೊಳಿಸಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಪುತ್ರನೂ ಹಗರಣದಲ್ಲಿ ಭಾಗಿ: ಜಾರಿ ನಿರ್ದೇಶನಾಲಯ
ಅನಿಲ್ ದೇಶಮುಖ್ ನ್ಯಾಯಾಂಗ ಬಂಧನ ವಿಸ್ತರಣೆ
ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 2ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಅನಿಲ್ ದೇಶಮುಖ್ರನ್ನು 14 ದಿನಗಳ ಇಡಿ ಕಸ್ಟಡಿಗೆ ನೀಡಲಾಗಿತ್ತು. ಇಡಿ ಕಸ್ಟಡಿಯಲ್ಲಿ 14 ದಿನಗಳನ್ನು ಕಳೆದ ನಂತರ, ವಿಶೇಷ ನ್ಯಾಯಾಲಯವು ನವೆಂಬರ್ 15 ರಂದು ದೇಶಮುಖ್ ಅವರನ್ನು ನವೆಂಬರ್ 29 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ನಿನ್ನೆ ಮತ್ತೆ ಕೋರ್ಟ್ ನ್ಯಾಯಾಂಗ ಬಂಧನದ ಅವಧಿಯನ್ನು ಡಿ.13ರ ವರೆಗೆ ವಿಸ್ತರಿಸಿ ಆದೇಶ ನೀಡಿದೆ.