ನಂದ್ಯಾಲ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಒಟ್ಟಿಗೆ ಪತ್ತೆಯಾದ ನಾಲ್ಕು ಹುಲಿ ಮರಿಗಳನ್ನು ಅವುಗಳ ತಾಯಿ ಹುಲಿಯೊಂದಿಗೆ ಸೇರಲು ಅರಣ್ಯಾಧಿಕಾರಿಗಳ ಪ್ರಯತ್ನ ಮುಂದುವರೆದಿದೆ. ತಾಯಿ ಹುಲಿ ಜಾಡು ಪತ್ತೆ ಹಚ್ಚಲು ಕಳೆದ ನಾಲ್ಕು ದಿನಗಳಿಂದ ಶ್ರಮಿಸುತ್ತಿದ್ದರೂ, ಅದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾಲ್ಕು ಮರಿಗಳನ್ನೂ ಕೂಡ ತಿರುಪತಿ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ.
ಇಲ್ಲಿನ ಕೋತಪಲ್ಲಿ ಮಂಡಲದ ಪೆದ್ದ ಗುಮ್ಮದಪುರಂ ಗ್ರಾಮದ ಬಳಿ ಮಾರ್ಚ್ 6ರಂದು ನಾಲ್ಕು ಹುಲಿ ಮರಿಗಳು ಪತ್ತೆಯಾಗಿದ್ದವು. ಈ ಮರಿಗಳನ್ನು ಗಮನಿಸಿದ್ದ ಗ್ರಾಮಸ್ಥರು ಅವುಗಳನ್ನು ರಕ್ಷಣೆ ಮಾಡಿದ್ದರು. ನಂತರ ಅರಣ್ಯ ಇಲಾಖೆಯ ವಿಷಯ ಮುಟ್ಟಿಸಿದ್ದರು. ಆದರೆ, ತಾಯಿ ಹುಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿಯೇ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ತಾಯಿ ಹುಲಿಯ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದರು.
ಫಲಕೊಡದ ಶತತ ಶ್ರಮ: ತಾಯಿ ಹುಲಿಯೊಂದಿಗೆ ಅನಾಥ ಮರಿಗಳನ್ನು ಸೇರಿಸಬೇಕೆಂದು ಸಾಕಷ್ಟು ಶ್ರಮಿಸಲಾಗುತ್ತಿದೆ. ಇದಕ್ಕಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ 300ಕ್ಕೂ ಹೆಚ್ಚು ಜನರು ಹುಲಿ ಮರಿಗಳನ್ನು ಅದರ ತಾಯಿಗೆ ಹಿಂದಿರುಗಿಸುವ ಕಾರ್ಯಾಚರಣೆಯಲ್ಲಿ ಕೆಲಸ ತೊಡಗಿಸಿಕೊಂಡಿದ್ದರು. ಆದರೆ, ಅಷ್ಟೇ ಪ್ರಯತ್ನಗಳು ಮಾಡಿದರೂ ತಾಯಿ ಹುಲಿ ಪತ್ತೆ ಆಗುತ್ತಿಲ್ಲ. ಇಷ್ಟೇ ಅಲ್ಲ, ಈ ತಾಯಿ ಹುಲಿಯ ಕುರುಹುಗಳನ್ನು ಪತ್ತೆಹಚ್ಚಲು ಕ್ರಮವಾಗಿ ಆತ್ಮಕೂರು ಮತ್ತು ಕೊತ್ತಪಲ್ಲಿ ಮಂಡಲಗಳ ವ್ಯಾಪ್ತಿಯ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಸುಮಾರು 40 ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಲಾಗಿದೆ.
ಮತ್ತೊಂದೆಡೆ, ಮುಸಲಿಮಡುಗು ಗ್ರಾಮದ ಬಳಿ ತಾಯಿ ಹುಲಿ ಇರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ದೊರೆತಿತ್ತು. ಈ ಮಾಹಿತಿ ಪಡೆದ ಅಧಿಕಾರಿಗಳು ಇಲ್ಲಿ ಕೂಡ ಹುಲಿಯ ಹೆಜ್ಜೆ ಗುರುತು ಪತ್ತೆ ಹಚ್ಚಲು ಮುಂದಾಗಿದ್ದರು. ಆದರೆ, ಈ ಎಲ್ಲ ಪ್ರಯತ್ನಗಳು ಫಲಕಾರಿಯಾಗದ ಕಾರಣ ಹುಲಿ ಮರಿಗಳನ್ನು ತಿರುಪತಿ ಮೃಗಾಲಯಕ್ಕೆ ಸ್ಥಳಾಂತರಿಸುವ ನಿರ್ಧಾರಕ್ಕೆ ಉನ್ನತ ಅಧಿಕಾರಿಗಳು ಬಂದಿದ್ದಾರೆ.
ಅಂತೆಯೇ, ಉನ್ನತ ಸಮಿತಿಯ ಆದೇಶದ ಮೇರೆಗೆ ತಿರುಪತಿ ಮೃಗಾಲಯಕ್ಕೆ ಹುಲಿ ಮರಿಗಳನ್ನು ಸ್ಥಳಾಂತರಿಸಲಾಗಿದೆ. ನಾಲ್ವರು ವೈದ್ಯರೊಂದಿಗೆ ವಿಶೇಷ ವಾಹನದಲ್ಲಿ ಆತ್ಮಕೂರು ಮಂಡಲದಿಂದ ತಿರುಪತಿಗೆ ಅವುಗಳನ್ನು ಸಾಗಿಸಲಾಗಿದೆ. ಈ ಹುಲಿ ಮರಿಗಳನ್ನು ತಿರುಪತಿ ಮೃಗಾಲಯದಲ್ಲಿ ಸುರಕ್ಷಿತವಾಗಿ ಪೋಷಿಸಲಾಗುವುದು. ಮುಂದಿನ ಎರಡು ವರ್ಷಗಳ ಕಾಲ ಅವುಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ನಂತರ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಬಿಡುವ ಕುರಿತ ಸಹ ನಿರ್ಧಾರ ತೆಗೆದುಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರಿಗಳ ಬಳಿಗೆ ಬರಲು ತಾಯಿ ಹಿಂದೇಟು: ಹುಲಿ ಮರಿಗಳು ಪತ್ತೆಯಾದ ಸ್ಥಳಕ್ಕೆ ತಾಯಿ ಮರಳಿ ಬರಬಹುದು ಎಂದು ತಿಳಿದು ಅಧಿಕಾರಿಗಳು ಅದೇ ಸ್ಥಳದಲ್ಲೇ ಮರಿಗಳನ್ನು ಇರಿಸುವ ಪ್ರಯತ್ನವನ್ನೂ ಮಾಡಿದ್ದರು. ಆದರೂ, ತಾಯಿ ಹುಲಿ ಜಾಡು ಪತ್ತೆಯಾಗಿಲ್ಲ. ಹೀಗಾಗಿ, ತಾಯಿ ಹುಲಿ ತನ್ನ ಮರಿಗಳಿಗೆ ಬಳಿಗೆ ಬರಲು ಹಿಂದೇಟು ಹಾಕುತ್ತಿದೆ ಎಂದು ಅಧಿಕಾರಿಗಳು ಭಾವಿಸುತ್ತಿದ್ದಾರೆ. ಏಕೆಂದರೆ, ಮರಿಗಳನ್ನು ಮನುಷ್ಯರು ಮುಟ್ಟಿರಬಹುದು ತಾಯಿ ಹುಲಿಯ ಗಮನಕ್ಕೆ ಬಂದಿರಬಹುದು. ಇದರಿಂದ ಹುಲಿ ಮರಿಗಳಿಗೆ ಮತ್ತೆ ತಾಯಿಯ ಬಳಿಗೆ ಮರಳಲು ಅವಕಾಶವಿಲ್ಲ ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ.
ಹುಲಿ ಮರಿಗಳನ್ನು ಅವುಗಳ ತಾಯಿಯೊಂದಿಗೆ ಸೇರಿಸಲು ನಾವು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇವೆ. ಆದರೆ, ಅದು ವಿಫಲವಾಗಿದೆ. ಹುಲಿಯ ಕುರುಹುಗಳ ಸರಿಯಾಗಿ ಪತ್ತೆಯಾಗದೇ ಇರುವುದನ್ನು ಪರಿಗಣಿಸಿ ತಿರುಪತಿ ಮೃಗಾಲಯಕ್ಕೆ ಸ್ಥಳಾಂತರಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಎರಡು ವರ್ಷಗಳ ನಂತರ ಮೃಗಾಲಯದಲ್ಲಿ ಪೋಷಿಸಲಾಗುತ್ತದೆ. ಬಳಿಕ ಹುಲಿ ಮರಿಗಳನ್ನು ಅವುಗಳ ಮೂಲ ಸ್ಥಳವಾದ ನಲ್ಲಮಲ ಅರಣ್ಯಕ್ಕೆ ಬಿಡಲಾಗುತ್ತದೆ ಎಂದು ವಲಯ ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ಒಟ್ಟಿಗೆ ನಾಲ್ಕು ಹುಲಿ ಮರಿಗಳು ಪತ್ತೆ: ತಾಯಿ ಹುಲಿಗಾಗಿ 300 ಅಧಿಕಾರಿಗಳು, ಸಿಬ್ಬಂದಿಯಿಂದ ಶೋಧ ಕಾರ್ಯ