ವಿಜಯವಾಡ (ಆಂಧ್ರಪ್ರದೇಶ): 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವ 45 ವರ್ಷಕ್ಕೂ ಹೆಚ್ಚು ವಯಸ್ಸಾಗಿರುವ ತಾಯಂದಿರಿಗಾಗಿ ಆಂಧ್ರ ಪ್ರದೇಶ ಸರ್ಕಾರ ವಿಶೇಷ ಕೋವಿಡ್ -19 ವ್ಯಾಕ್ಸಿನೇಷನ್ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದಲ್ಲಿ 8 ಲಕ್ಷ ಡೋಸ್ ಲಸಿಕೆ ನೀಡುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ವಿಜಯವಾಡ ಜಿಲ್ಲೆಯಲ್ಲಿ ಸುಮಾರು 260 ಕೇಂದ್ರಗಳಲ್ಲಿ ಒಟ್ಟು 1 ಲಕ್ಷ ಲಸಿಕೆಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ನಿವಾಸ್ ಮಾಹಿತಿ ನೀಡಿದ್ದಾರೆ.
ಅಭಿಯಾನವನ್ನು ಪರಿಶೀಲಿಸಿ ಮಾತನಾಡಿದ ಸಾರ್ವಜನಿಕ ಆರೋಗ್ಯ ನಿರ್ದೇಶಕಿ ಡಾ.ಟಿ.ಗೀತಾ ಪ್ರಸಾದಿನಿ, ಈ ಅಭಿಯಾನದಲ್ಲಿ 8 ರಿಂದ 9 ಲಕ್ಷ ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲು ಸರ್ಕಾರ ವ್ಯವಸ್ಥೆ ಮಾಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಸುಮಾರು 14 ಲಕ್ಷ ಡೋಸ್ ಲಸಿಕೆ ಕಳುಹಿಸಲಾಗಿದೆ. ನಿನ್ನೆವರೆಗೆ ನಾವು 5.5 ಲಕ್ಷ ತಾಯಂದಿರಿಗೆ ಲಸಿಕೆ ಪೂರೈಸಿದ್ದೇವೆ. ಉಳಿದ 4.5-5 ಲಕ್ಷ ತಾಯಂದಿರಿಗೆ ಲಸಿಕೆ ಪೂರೈಸಲಾಗುತ್ತದೆ. ಇಲ್ಲಿಯವರೆಗೆ 45 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸುಮಾರು 56 ಪ್ರತಿಶತದಷ್ಟು ಜನ ಲಸಿಕೆ ಪಡೆದಿದ್ದಾರೆ. ಇನ್ನುಳಿದ ಶೇ 44 ಜನರಿಗೆ ಲಸಿಕೆ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದಿದ್ದಾರೆ.
ವ್ಯಾಕ್ಸಿನ್ ಪಡೆದು ಮಾತನಾಡಿದ ನಿರೀಕ್ಷಣಾ ಎಂಬ ಮಹಿಳೆ, ಕೊರೊನಾ ಸಮಯದಲ್ಲಿ ವೈದ್ಯಕೀಯ ಮತ್ತು ಅಂಗನವಾಡಿ ಸಿಬ್ಬಂದಿ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ತಾಯಂದಿರಿಗೆ ಲಸಿಕೆ ನೀಡಿದ ರಾಜ್ಯ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ. ಶ್ರೀನಿವಾಸ ರಾವ್ ಎಂಬುವವರು ಮಾತನಾಡಿ, ಈ ಅಭಿಯಾನದ ಭಾಗವಾಗಲು ನನಗೆ ಸಂತೋಷವಾಗಿದೆ. ನನ್ನ ಮೊದಲ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದೇನೆ. ಈ ಅವಕಾಶ ನೀಡಿದ ಸರ್ಕಾರಕ್ಕೆ ಧನ್ಯವಾದ ಎಂದಿದ್ದಾರೆ.
ಓದಿ: BMTC ಪ್ರಯಾಣಿಕರಿಗೆ ಗುಡ್ ನ್ಯೂಸ್.. ಏಪ್ರಿಲ್ ಬಸ್ ಪಾಸ್ ಅವಧಿ ಜುಲೈವರೆಗೆ ವಿಸ್ತರಣೆ