ಅಮರಾವತಿ : ಪ್ರಸ್ತುತ ಆಂಧ್ರ ಪ್ರದೇಶ ಸರ್ಕಾರವು ಕುಡುಕರ ಜೇಬನ್ನು ಲೂಟಿ ಮಾಡಿ ತನ್ನ ಖಜಾನೆ ತುಂಬಿಸಿಕೊಳ್ಳಲು ಬಯಸಿದೆಯಾ ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ. ಮುಂದಿನ ಹಣಕಾಸು ವರ್ಷದಲ್ಲಿ ಸಾರಾಯಿ ಮಾರಾಟದಿಂದ ಸರ್ಕಾರವು 30 ರಿಂದ 33 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಗುರಿ ಹಾಕಿಕೊಂಡಿರುವುದರಿಂದ ಇಂಥ ಪ್ರಶ್ನೆಗಳು ಸಹಜವಾಗಿಯೇ ಮೂಡಿವೆ. ಗುರುವಾರ ಮಂಡಿಸಿದ ಬಜೆಟ್‌ನಲ್ಲಿ, 2023-24ನೇ ಹಣಕಾಸು ವರ್ಷದಲ್ಲಿ ಕೇವಲ ಮದ್ಯ ಮಾರಾಟದ ಮೂಲಕ ರಾಜ್ಯ ಅಬಕಾರಿ ಸುಂಕದಡಿಯಲ್ಲಿ 18 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹದ ಗುರಿಯನ್ನು ಸರ್ಕಾರ ಹೊಂದಿದೆ.
ರಾಜ್ಯ ಅಬಕಾರಿಯನ್ನು ಹೊರತುಪಡಿಸಿ, ಮದ್ಯ ಮಾರಾಟದ ಮೌಲ್ಯವು ವ್ಯಾಟ್ ಮತ್ತು ವಿಶೇಷ ಮಾರ್ಜಿನ್‌ನಂತಹ ಇತರ ತೆರಿಗೆಗಳನ್ನು ಸಹ ಒಳಗೊಂಡಿದೆ. ಅದರ ಬಾಬ್ತಿನಲ್ಲಿ ಇನ್ನೂ 7 ರಿಂದ 8 ಸಾವಿರ ಕೋಟಿ ರೂಪಾಯಿ ಆದಾಯ ಸಾಧ್ಯ. ಈ ಲೆಕ್ಕಾಚಾರದ ಪ್ರಕಾರ ಒಂದು ವರ್ಷದಲ್ಲಿ ಮದ್ಯದಿಂದ 25 ಸಾವಿರದಿಂದ 26 ಸಾವಿರ ಕೋಟಿ ಆದಾಯ ಬರಲಿದೆ ಎಂದು ಅಂದಾಜಿಸಲಾಗಿದೆ. ಜನರು ಆದಷ್ಟು ಹೆಚ್ಚು ಮದ್ಯ ಸೇವಿಸುವಂತೆ ಮಾಡಿ ಆ ಮೂಲಕ ಸರ್ಕಾರವು ಸಾಧ್ಯವಾದಷ್ಟು ಆದಾಯ ಗಳಿಸಲು ಪ್ರಯತ್ನಿಸುತ್ತಿದೆ. ಈ ಮಟ್ಟಿಗಿನ ಆದಾಯ ಬರಬೇಕಾದರೆ ಕನಿಷ್ಠ 30 ರಿಂದ 33 ಸಾವಿರ ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಬೇಕಿದೆ ಎಂದು ಅಬಕಾರಿ ಮೂಲಗಳು ಅಂದಾಜಿಸುತ್ತವೆ. ಟಾರ್ಗೆಟ್ ವಿಧಿಸಿ ಮದ್ಯ ಮಾರಾಟ ಮಾಡುವುದರಿಂದ ಮಾತ್ರ ಇದು ಸಾಧ್ಯ.
ಮುಖ್ಯಮಂತ್ರಿ ಜಗನ್ ಅವರೇ, ನಿಮ್ಮ ಮದ್ಯಪಾನ ನಿಷೇಧದ ಭರವಸೆ ಏನಾಯಿತು?
- ಜಗನ್ ವಿರೋಧ ಪಕ್ಷದ ನಾಯಕನಾಗಿದ್ದಾಗ ಮತ್ತು ಅಧಿಕಾರಕ್ಕೆ ಬಂದ ನಂತರವೂ ಹಂತಹಂತವಾಗಿ ಮದ್ಯ ನಿಷೇಧವನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇದೀಗ ಮುಖ್ಯಮಂತ್ರಿ ಜಗನ್ ಸರ್ಕಾರ ಹಂತ ಹಂತವಾಗಿ ಮದ್ಯ ನಿಷೇಧದ ಭರವಸೆಯನ್ನು ಕೈ ಬಿಟ್ಟಿರುವಂತೆ ಕಾಣುತ್ತಿದೆ. ಪ್ರತಿ ವರ್ಷ ಮದ್ಯದ ಆದಾಯ ಹೆಚ್ಚುತ್ತಿದೆ. ಆದಾಯದ ಗುರಿಯನ್ನು ಕೂಡ ಹೆಚ್ಚಿಸಲಾಗುತ್ತಿದೆ.
- ಪರಿಷ್ಕೃತ ಅಂದಾಜಿನ ಪ್ರಕಾರ, 2022-23ರಲ್ಲಿ ರಾಜ್ಯ ಅಬಕಾರಿ ತೆರಿಗೆಯಿಂದ ರೂ.16,167 ಕೋಟಿ ಆದಾಯ ಬರಲಿದೆ ಎಂದು ಸರ್ಕಾರ ಹೇಳಿದೆ. 2023-24ರಲ್ಲಿ ಇದೇ ತೆರಿಗೆಯಿಂದ ರೂ.18,000 ಕೋಟಿ ಆದಾಯ ಬರುವ ನಿರೀಕ್ಷೆಯಿದೆ. ಅಂದರೆ ಹೊಸ ಹಣಕಾಸು ವರ್ಷದಲ್ಲಿ ಹೆಚ್ಚುವರಿ ರೂ.1,833 ಕೋಟಿಗಳ ಗುರಿಯನ್ನು ಹೊಂದಿದೆ. ಇದಲ್ಲದೆ, ವ್ಯಾಟ್ ಮತ್ತು ಇತರ ತೆರಿಗೆಗಳ ಮೂಲಕ ರೂ.7 ರಿಂದ 8 ಸಾವಿರ ಕೋಟಿಗಳ ಹೆಚ್ಚುವರಿ ಆದಾಯ ಪಡೆಯುವ ಸಾಧ್ಯತೆಯಿದೆ.
- ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮಾರಾಟ : ರಾಜ್ಯ ಸರ್ಕಾರವು 2019-20ರಲ್ಲಿ ರೂ.20,928 ಕೋಟಿ, 2020-21ರಲ್ಲಿ ರೂ.20,189 ಕೋಟಿ ಮತ್ತು 2021-22ರಲ್ಲಿ ರೂ.25,023 ಕೋಟಿ ಮೌಲ್ಯದ ಮದ್ಯವನ್ನು ಮಾರಾಟ ಮಾಡಿದೆ. 2022-23ರಲ್ಲಿ ಇದುವರೆಗೆ ರಾಜ್ಯ ಸರ್ಕಾರ ರೂ.26,500 ಕೋಟಿ ಮೌಲ್ಯದ ಮದ್ಯ ಮಾರಾಟ ಮಾಡಿದೆ. ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ರೂ.28 ಸಾವಿರ ಕೋಟಿ ಮೌಲ್ಯದ ಮದ್ಯ ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿದೆ
- ಮದ್ಯದ ಮೇಲೆ ವಿಧಿಸಲಾಗುವ ವಿವಿಧ ರೀತಿಯ ತೆರಿಗೆಗಳಲ್ಲಿ ರಾಜ್ಯ ಅಬಕಾರಿ ತೆರಿಗೆ ಮುಖ್ಯವಾದುದು. ಈ ಸುಂಕವೇ 2016-17ರಲ್ಲಿ ಸರ್ಕಾರಕ್ಕೆ ರೂ.4,644.66 ಕೋಟಿ ಆದಾಯ ತಂದಿದೆ. ಮುಂಬರುವ ಆರ್ಥಿಕ ವರ್ಷದಲ್ಲಿ ರೂ.18,000 ಕೋಟಿ ಆದಾಯ ಬರಲಿದೆ ಎಂದು ಬಜೆಟ್ ನಲ್ಲಿ ಅಂದಾಜಿಸಲಾಗಿದೆ. ಈ ಏಳು ವರ್ಷಗಳಲ್ಲಿ ಮದ್ಯ ಮಾರಾಟದ ಮೂಲಕ ರಾಜ್ಯದ ಅಬಕಾರಿ ರೂಪದಲ್ಲಿ ಪಡೆದ ಆದಾಯದಲ್ಲಿ 3.87 ಪಟ್ಟು ಹೆಚ್ಚಳವಾಗಿದೆ ಎಂಬುದು ಗಮನಾರ್ಹ.
- ಮದ್ಯದಂಗಡಿಗಳನ್ನು ಕಡಿಮೆ ಮಾಡಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆಧರೆ ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರವೇ ಪ್ರತಿ ವರ್ಷ ಮದ್ಯದ ಮಾರಾಟದ ಗುರಿಯನ್ನು ಮತ್ತು ಆದಾಯವನ್ನು ಹೆಚ್ಚಿಸುತ್ತಿದೆ.
- ಮುಂದಿನ ಕೆಲವು ವರ್ಷಗಳಲ್ಲಿ ಮದ್ಯದ ಆದಾಯದ ಖಾತರಿಯಾಗಿ ರಾಜ್ಯ ಸರ್ಕಾರವು ಈಗಾಗಲೇ ಆಂಧ್ರಪ್ರದೇಶ ರಾಜ್ಯ ಪಾನೀಯಗಳ ನಿಗಮದ (APSBCL) ಮೂಲಕ ರೂ.1000 ಕೋಟಿಗಳನ್ನು ಎರವಲು ಪಡೆದಿದೆ. APSBCL ತನ್ನ ಬಾಂಡ್‌ಗಳನ್ನು ಹರಾಜು ಹಾಕಿದೆ ಮತ್ತು ಹೆಚ್ಚಿನ ಬಡ್ಡಿಗೆ ರೂ.8,300 ಕೋಟಿ ಸಾಲವನ್ನು ಸಂಗ್ರಹಿಸಿದೆ. ಈ ಸಾಲಗಳನ್ನು ತೀರಿಸಲು APSBCL ತನ್ನ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಬೇಕಾಗಿದೆ. ಇದು ಮದ್ಯ ಮಾರಾಟ ಹೆಚ್ಚಿಸುವುದರಿಂದ ಮಾತ್ರ ಸಾಧ್ಯ ಎನ್ನಲಾಗಿದೆ.
- ಮದ್ಯದಿಂದ ಬರುವ ಆದಾಯವನ್ನು ‘ಚೆಯೂಟ’, ‘ಅಮ್ಮ ಓಡಿ’, ‘ಆಸರಾ’ ದಂತಹ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಬಳಸುವುದಾಗಿ ಹೇಳಿ ರಾಜ್ಯ ಸರ್ಕಾರವು ಕೆಲವು ವರ್ಷಗಳ ಹಿಂದೆ ಎಪಿಎಸ್‌ಬಿಸಿಎಲ್‌ಗೆ ಅನುಷ್ಠಾನದ ಜವಾಬ್ದಾರಿಯನ್ನು ಹಸ್ತಾಂತರಿಸಿತ್ತು. ಇದಕ್ಕಾಗಿ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಮದ್ಯ ಮಾರಾಟದಿಂದ ಬರುವ ಆದಾಯವನ್ನು ಎಸ್‌ಸಿ, ಎಸ್‌ಟಿ ಮತ್ತು ಬಿಸಿಗಳ ಹಿತಾಸಕ್ತಿ ಕಾಪಾಡಲು ಕಲ್ಯಾಣ ಯೋಜನೆಗಳಿಗೆ ಬಳಸಲಾಗುವುದು ಎಂದು ಅದು ಹೇಳಿದೆ.
ಇದನ್ನೂ ಓದಿ : ಮದ್ಯ ಖರೀದಿ ಹಕ್ಕು 18ಕ್ಕೆ ಇಳಿಸುವ ನಿರ್ಧಾರಕ್ಕೆ ಆಕ್ಷೇಪ.. ಹಿಂದಿನಂತೆ ವಯೋಮಿತಿ 21 ವರ್ಷಕ್ಕೆ ನಿಗದಿ!