ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಮಂಗಳವಾರ ನಿತಿನ್ ಗಡ್ಕರಿ ಸೇರಿದಂತೆ ಮೂವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ತಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ಗಡ್ಕರಿ ಅವರೊಂದಿಗೆ ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ ರೆಡ್ಡಿ, ವಿಶಾಖಪಟ್ಟಣಂನಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸಲು ಆರು ಪಥಗಳ ರಸ್ತೆ ಸೇರಿದಂತೆ ರಾಜ್ಯಕ್ಕೆ ಹಲವಾರು ರಸ್ತೆ ಯೋಜನೆಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿದ್ದಾರೆ.
ವಿಶಾಖಪಟ್ಟಣಂ ಬಂದರಿನಿಂದ ಋಷಿಕೊಂಡ ಮತ್ತು ಭೀಮಿಲಿ ಮೂಲಕ ಭೋಗಾಪುರಂವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕುರಿತು ಮುಖ್ಯಮಂತ್ರಿಗಳು ಚರ್ಚಿಸಿದ್ದಾರೆ.
ಹೆಚ್ಚಿನ ಓದಿಗೆ: ರಾಜಕಾರಣಿಗಳು-ಪತ್ರಕರ್ತರ ನಡುವೆ ಬಿಡಿಸಲಾಗದ ನಂಟು: ಸಿಎಂ
ಈ ಉದ್ದೇಶಿತ ಹೆದ್ದಾರಿಯು ವಿಶಾಖಪಟ್ಟಣಂ ಬಂದರಿನಿಂದ ಒಡಿಶಾ ಮತ್ತು ಛತ್ತೀಸ್‌ಗಢಕ್ಕೆ ದೂರವನ್ನು ಕಡಿಮೆ ಮಾಡುವುದರಿಂದ ವಿಶಾಖಪಟ್ಟಣಂಗೆ ಉಪಯುಕ್ತವಾಗಲಿದೆ ಎಂದು ಅವರು ತಿಳಿಸಿದ್ದಾರೆ ಎನ್ನಲಾಗ್ತಿದೆ.
ಈ ರಸ್ತೆಯು ಕರಾವಳಿಯುದ್ದಕ್ಕೂ ಇರುವ ಬೀಚ್ ಕಾರಿಡಾರ್ ಯೋಜನೆಗಳ ಹತ್ತಿರ ಹೋಗುತ್ತದೆ. ಈ ರಸ್ತೆಯ ಅಭಿವೃದ್ಧಿಯು ಉದ್ದೇಶಿತ ಭೋಗಾಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಎಂದು ಸಿಎಂ ಜಗನ್ ಅವರು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಗುಂಟೂರು ಜಿಲ್ಲೆಯ ಬಾಪ್ಟ್ಲಾ ಮಂಡಲದಲ್ಲಿ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಎರಡು-ಪಥದ ಬೈಪಾಸ್ ರಸ್ತೆಯನ್ನು ಹಾಗೂ ರಾಷ್ಟ್ರೀಯ ಹೆದ್ದಾರಿ 216ಅನ್ನು ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸುವಂತೆ ರೆಡ್ಡಿ ಇದೇ ವೇಳೆ ಒತ್ತಾಯಿಸಿದ್ದಾರೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮತ್ತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನೂ ಸಿಎಂ ಭೇಟಿಯಾಗಿದ್ದಾರೆ. ಇನ್ನೂ ಕೆಲವು ಕೇಂದ್ರ ಸಚಿವರನ್ನು ಭೇಟಿ ಮಾಡಲು ಯೋಜಿಸಿದ್ದಾರೆ.
ಸೋಮವಾರ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಇಬ್ಬರು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಜ್ಯೋತಿರಾಧಿತ್ಯ ಸಿಂದಿಯಾ ಅವರನ್ನು ಭೇಟಿ ಮಾಡಿದ್ದರು.