ಆಂಧ್ರಪ್ರದೇಶ/ತಿರುಪತಿ : ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಶೌರ್ಯ ಪದಕ ಪಡೆಯುವ ರಾಜ್ಯ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ನೀಡಲಾಗುವ ನಗದನ್ನು 10 ಪಟ್ಟು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಪರಮವೀರ್ ಚಕ್ರ ಮತ್ತು ಅಶೋಕ ಚಕ್ರ ವಿಜೇತರಿಗೆ ನಗದು ಪ್ರಶಸ್ತಿ ಈಗ 10 ಲಕ್ಷ ರೂ. ಇದೆ. ಅದನ್ನು 1 ಕೋಟಿ ರೂ.ಗೆ ಹೆಚ್ಚಿಸಲಾಗುವುದು. ಮಹಾವೀರ್ ಚಕ್ರ ಮತ್ತು ಕೀರ್ತಿ ಚಕ್ರ ಪ್ರಶಸ್ತಿ ವಿಜೇತರಿಗೆ ರಾಜ್ಯ ನೀಡುವ ಪ್ರೋತ್ಸಾಹದ ಮೊತ್ತ 8 ಲಕ್ಷ ರೂ. ಇದ್ದು, ಇದೀಗ ಅದನ್ನ 80 ಲಕ್ಷ ರೂ.ಗೆ ಹೆಚ್ಚಿಸಲಾಗುವುದು.
ವೀರ್ ಚಕ್ರ ಮತ್ತು ಶೌರ್ಯ ಚಕ್ರ ವಿಜೇತ ರಾಜ್ಯ ಸಶಸ್ತ್ರ ಸಿಬ್ಬಂದಿಗೆ ನಗದು ಪ್ರಶಸ್ತಿಯನ್ನು 6 ಲಕ್ಷ ರೂ.ಗಳಿಂದ 60 ಲಕ್ಷ ರೂ.ಗೆ ಹೆಚ್ಚಿಸಲಾಗುವುದು. ಇನ್ನು, ಕರ್ತವ್ಯದ ವೇಳೆ ಹುತಾತ್ಮರಾಗುವ ರಾಜ್ಯದ ಎಲ್ಲಾ ಸಶಸ್ತ್ರ ಸಿಬ್ಬಂದಿಯ ರಕ್ತ ಸಂಬಂಧಿಗಳಿಗೆ 50 ಲಕ್ಷ ರೂ. ನೀಡಲಾಗುತ್ತದೆ ಎಂದು ಜಗನ್ ಘೋಷಿಸಿದ್ದಾರೆ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಗೆದ್ದ ವೀರಸೈನಿಕರಿಗಾಗಿ ಸ್ವರ್ನಿಮ್ ವಿಜಯ್ ವರ್ಷದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರಿಗೆ ಸ್ವರ್ನಿಮ್ ವಿಜಯ್ ಮಾಷಲ್ ಪದಕ ನೀಡಲಾಯ್ತು.
ಜಗನ್ ಮೊದಲ ಬಾರಿಗೆ ನಿವೃತ್ತ ಮೇಜರ್ ಜನರಲ್ ಸಿ ವೇಣುಗೋಪಾಲ್ ಅವರ ನಿವಾಸಕ್ಕೆ ಭೇಟಿ ನೀಡಿ, 1971ರ ಯುದ್ಧದ ಜೀವಂತ ದಂತಕಥೆ ಎಂದು ಅವರನ್ನು ಬಣ್ಣಿಸಿ ಸನ್ಮಾನಿಸಿದರು. ನಂತರ ಪೊಲೀಸ್ ಪರೇಡ್ ಮೈದಾನದಲ್ಲಿ 1971ರ ಯುದ್ಧದಲ್ಲಿ ನಿರ್ಣಾಯಕ ಪಾತ್ರವಹಿಸಿ ಹುತಾತ್ಮರಾದ ನಾಯಕ್ ಜೆ ಸನ್ಯಾಸಿಯ ಅವರ ಪತ್ನಿ ಜೆ.ಚಿನತಲ್ಲಿಯನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ರಾಜ್ಯ ಸಚಿವರು ಮತ್ತು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.