ಅಮರಾವತಿ (ಆಂಧ್ರಪ್ರದೇಶ): ಕೋವಿಡ್ ಸಾಂಕ್ರಾಮಿಕದ ನಡುವೆಯೂ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಹೊರಟಿದ್ದ ಆಂಧ್ರಪ್ರದೇಶ ಸರ್ಕಾರ ಇದೀಗ ಸುಪ್ರೀಂಕೋರ್ಟ್ ಎಚ್ಚರಿಕೆ ಬೆನ್ನಲ್ಲೇ ತನ್ನ ನಿರ್ಧಾರವನ್ನು ಕೈಬಿಟ್ಟಿದೆ. ಬಹುತೇಕ ಎಲ್ಲಾ ರಾಜ್ಯಗಳು ಕೊರೊನಾ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಈ ವರ್ಷದ 10 ಮತ್ತು 12ನೇ ತರಗತಿ ಲಿಖಿತ ಪರೀಕ್ಷೆಗಳನ್ನು ರದ್ದುಗೊಳಿಸಿದ್ದವು.
ಸುಪ್ರೀಂಕೋರ್ಟ್ ಆದೇಶದಂತೆ ಈ ರಾಜ್ಯಗಳು ಮೌಲ್ಯಮಾಪನ ಮಾನದಂಡಗಳನ್ನು ಪಾಲಿಸಲು ಸಮ್ಮತಿಸಿದ್ದವು. ಈ ಸಂಬಂಧ ನಿನ್ನೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜುಲೈ 31 ರೊಳಗೆ ಸಿಬಿಎಸ್ಇ ಮತ್ತು ಐಸಿಎಸ್ಇ 12ನೇ ತರಗತಿ ಫಲಿತಾಂಶವನ್ನು ಘೋಷಿಸಬೇಕೆಂದು ರಾಜ್ಯ ಶಿಕ್ಷಣ ಮಂಡಳಿಗಳಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಓರ್ವ ವಿದ್ಯಾರ್ಥಿ ಮೃತಪಟ್ಟರೂ ನೀವೇ ಹೊಣೆ: ಆಂಧ್ರ, ಕೇರಳಕ್ಕೆ ಸುಪ್ರೀಂಕೋರ್ಟ್ ಎಚ್ಚರಿಕೆ
ನಿನ್ನೆ ವಿಚಾರಣೆ ವೇಳೆ ಪರೀಕ್ಷೆ ನಡೆಸುವ ಆಂಧ್ರ ಸರ್ಕಾರದ ನಿರ್ಧಾರವನ್ನ ಪ್ರಶ್ನಿಸಿದ್ದ ಕೋರ್ಟ್, ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿಗಳನ್ನು ಪರಿಶೀಲಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ? ಈ ಸಂಬಂಧ ಶೀಘ್ರದಲ್ಲೇ ವರದಿ ನೀಡಿ ಎಂದು ಕೇಳಿತ್ತು.ಇದಕ್ಕೂ ಮುನ್ನ ಮಂಗಳವಾರ ನಡೆದ ವಿಚಾರಣೆ ವೇಳೆ ಓರ್ವ ವಿದ್ಯಾರ್ಥಿ ಮೃತಪಟ್ಟರೂ ನೀವೇ ಹೊಣೆ ಎಂದು ಆಂಧ್ರ ಹಾಗೂ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿತ್ತು.
ಇದೀಗ ಎಚ್ಚೆತ್ತುಕೊಂಡಿರುವ ಆಂಧ್ರ ಸರ್ಕಾರ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಆದರೆ ಸುಪ್ರೀಂ ಆದೇಶದಂತೆ ಜುಲೈ 31 ರೊಳಗೆ ಫಲಿತಾಂಶ ಪ್ರಕಟಿಸಲು ಸಾಧ್ಯವಿಲ್ಲ. ನಮ್ಮ ರಾಜ್ಯದ ಪರೀಕ್ಷಾ ಹಾಗೂ ಆಂತರಿಕ ಮೌಲ್ಯಮಾಪನ ಪ್ರಕ್ರಿಯೆಗಳು ಭಿನ್ನವಾಗಿರುವುದರಿಂದ ಇವನ್ನು ಪೂರ್ಣಗೊಳಿಸಲು ಸುಮಾರು 40 ದಿನಗಳು ಬೇಕಾಗುತ್ತದೆ ಎಂದು ರಾಜ್ಯ ಶಿಕ್ಷಣ ಸಚಿವ ಆದಿಮುಲಪು ಸುರೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಜುಲೈ 31 ರೊಳಗೆ 12ನೇ ತರಗತಿ ಫಲಿತಾಂಶ ಪ್ರಕಟಿಸಿ: ರಾಜ್ಯ ಶಿಕ್ಷಣ ಮಂಡಳಿಗಳಿಗೆ ಸುಪ್ರೀಂ ಸೂಚನೆ
ಪರೀಕ್ಷೆ ರದ್ದು ಸಾಧ್ಯವಿಲ್ಲ ಎಂದ ಕೇರಳ
ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದರೂ ಮಣಿಯದ ಕೇರಳ ಸರ್ಕಾರ 11ನೇ ತರಗತಿ ಪರೀಕ್ಷೆಗಳನ್ನು ಯಾವ ಕಾರಣಕ್ಕೂ ರದ್ದುಗೊಳಿಸಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಉಚ್ಛ ನ್ಯಾಯಾಲಯವು ಈ ನಿರ್ಧಾರದ ಹೊಣೆಯನ್ನು ಕೇರಳ ಹೈಕೋರ್ಟ್ಗೆ ವಹಿಸಿದೆ.