ಅಮರಾವತಿ: ಆಂಧ್ರ ಪ್ರದೇಶದ ವಿಧಾನಸಭೆ ಅಧಿವೇಶನ ಇಂದಿನಿಂದ (ಗುರುವಾರ) ಆರಂಭವಾಗಲಿದೆ. ರಾಜ್ಯಕ್ಕೆ ಮೂರು ರಾಜಧಾನಿಗಳ ಅವಶ್ಯಕತೆ ಇದೆ ಎಂಬ ಬಗ್ಗೆ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿಧಾನಸಭೆಯಲ್ಲಿ ಪವರ್ ಪಾಯಿಂಟ್ ಪ್ರಸೆಂಟೇಶನ್ ಪ್ರದರ್ಶಿಸಲಿದ್ದು, ಮೂರು ರಾಜಧಾನಿಗಳ ವಿಷಯ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆಯಿದೆ.
ಮೂರು ರಾಜಧಾನಿಗಳ ಯೋಜನೆಗೆ ಸಂಬಂಧಿಸಿದಂತೆ ಹೊಸ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸರ್ಕಾರದ ಕಡೆಯಿಂದ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಕಾನೂನಾತ್ಮಕ ಹೋರಾಟದ ಹಿನ್ನಡೆಯಿಂದ ಎದುರಾಗಬಹುದಾದ ಮುಖಭಂಗವನ್ನು ತಪ್ಪಿಸಿಕೊಳ್ಳುವ ಭರದಲ್ಲಿ, ಜಗನ್ ಮೋಹನ್ ರೆಡ್ಡಿ ಸರ್ಕಾರವು ಕಳೆದ ವರ್ಷ ನವೆಂಬರ್ 22 ರಂದು ವಿಧಾನಸಭೆಯಲ್ಲಿ ಏಕಾಏಕಿ 3 ರಾಜಧಾನಿಗಳ ಮಸೂದೆಯನ್ನು ಹಿಂಪಡೆದಿತ್ತು.
ಆಗ ಮುಖ್ಯಮಂತ್ರಿ ಜಗನ್, ತಮ್ಮ ವಿಕೇಂದ್ರೀಕೃತ ಅಭಿವೃದ್ಧಿ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ತಮ್ಮ ಸರ್ಕಾರವು ಸಂಪೂರ್ಣ, ಸಮಗ್ರ ಮತ್ತು ಉತ್ತಮ ಮಸೂದೆಯೊಂದನ್ನು ತರಲಿದೆ ಎಂದು ವಾಗ್ದಾನ ಮಾಡಿದ್ದರು.
ಈ ವರ್ಷದ ಮಾರ್ಚ್‌ನಲ್ಲಿ, ಹೈಕೋರ್ಟ್ ಮೂರು ರಾಜಧಾನಿಗಳ ರಚನೆಯ ವಿರುದ್ಧ ತೀರ್ಪು ನೀಡಿತ್ತು ಮತ್ತು ಅಮರಾವತಿಯನ್ನು ರಾಜ್ಯದ ರಾಜಧಾನಿಯಾಗಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಇದನ್ನೂ ಓದಿ: ಆಂಧ್ರಪ್ರದೇಶಕ್ಕಿನ್ನು ಅಮರಾವತಿಯೊಂದೇ ರಾಜಧಾನಿ: 3 ರಾಜಧಾನಿ ಮಸೂದೆ ಹಿಂಪಡೆದ ಜಗನ್ ಸರ್ಕಾರ