ಕೊಚ್ಚಿ( ಕೇರಳ): ಮಹಿಳೆಯಂತೆ ನಟಿಸಿದ್ದ ಐಟಿ ಉದ್ಯೋಗಿಯೊಬ್ಬ ಮಾಲ್ವೊಂದರ ಶೌಚಾಲಯ ಪ್ರವೇಶಿಸಿ ಅಲ್ಲಿನ ದೃಶ್ಯಗಳನ್ನು ಸೆರೆ ಹಿಡಿದಿದ್ದ. ಈ ಆರೋಪಕ್ಕೆ ಸಂಬಂಧಿಸಿದಂತೆ ಐಟಿ ಉದ್ಯೋಗಿಯನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಕಣ್ಣೂರು ಜಿಲ್ಲೆಯ ಕರಿವೆಲ್ಲೂರು ಮೂಲದ ಅಭಿಮನ್ಯು (23) ಬಂಧಿತ ಆರೋಪಿಯಾಗಿದ್ದು, ಇವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಕೊಚ್ಚಿಯ ಶಾಪಿಂಗ್ ಮಾಲ್‌ನಲ್ಲಿ ಈ ಘಟನೆ ನಡೆದಿತ್ತು. ಆರೋಪಿತ ಟೆಕ್ಕಿ ಮುಸುಕು ಧರಿಸಿ ವಾಶ್ ರೂಂನಲ್ಲಿ ಅಡಗಿಕೊಂಡು ಮಹಿಳೆಯರ ಖಾಸಗಿ ವಿಡಿಯೋಗಳನ್ನು ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದ. ಅಭಿಮನ್ಯು ಶಾಪಿಂಗ್ ಮಾಲ್ನ ನಿರ್ಜನ ಪ್ರದೇಶದಲ್ಲಿ ಮುಸುಕು ಧರಿಸುವ ಮೂಲಕ ಮಹಿಳೆಯರ ವಾಶ್ ರೂಂ ಪ್ರವೇಶಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ವಾಶ್ರೂಂನಲ್ಲಿ ಮಾಡಿದ್ದೇನು?: ವಾಶ್ ರೂಂ ಪ್ರವೇಶಿಸಿದ ಆರೋಪಿ, ಬಳಿಕ ತನ್ನ ಮೊಬೈಲ್ ಫೋನ್ ಅನ್ನು ರಟ್ಟಿನ ಪೆಟ್ಟಿಗೆಯೊಳಗೆ ಬಚ್ಚಿಟ್ಟಿದ್ದ ಅದರಲ್ಲಿ ಸಣ್ಣ ರಂಧ್ರವೊಂದನ್ನು ಮಾಡಿ ಮಹಿಳೆಯರ ವಾಶ್ ರೂಂನ ಬಾಗಿಲಿಗೆ ಅಂಟಿಸಿದ್ದ. ನಂತರ ಹೊರಗೆ ಬಂದು ವಾಶ್ ರೂಮಿನ ಮುಖ್ಯ ಬಾಗಿಲಿನ ಮುಂದೆ ನಿಂತುಕೊಂಡಿದ್ದ. ಈತನ ವಿಚಿತ್ರ ವರ್ತನೆಯನ್ನು ಗಮನಿಸಿ ಅನುಮಾನಗೊಂಡ ಮಾಲ್ನ ಸೆಕ್ಯೂರಿಟಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದರು. ಮಾಲ್ನ ಭದ್ರತಾ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ಆತನ ಅಸಲಿ ಮುಖ ಗೊತ್ತಾಗಿತ್ತು. ಮುಸುಕು ಧರಿಸಿ ವಾಶ್‌ರೂಮ್‌ನಲ್ಲಿದ್ದ ದೃಶ್ಯಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಎಂಬುದು ಪ್ರಾಥಮಿಕ ತನಿಖೆ ವೇಳೆ ಸ್ಪಷ್ಟವಾಗಿತ್ತು.
ಆರೋಪಿಯ ಅಸಲಿ ಮುಖ ಗೊತ್ತಾಗುತ್ತಿದ್ದಂತೆ ಹೆಚ್ಚಿನ ವಿಚಾರಣೆ ನಡೆಸಿದ ಪೊಲೀಸರಿಗೆ ಆತನ ಇನ್ನಷ್ಟು ಸತ್ಯಗಳು ಗೊತ್ತಾಗಿವೆ. ಈತ ಪಲರಿವಟ್ಟಂನ ಬಟ್ಟೆ ಅಂಗಡಿಯಿಂದ ಮುಸುಕು ವಸ್ತ್ರವನ್ನು ಖರೀದಿಸಿದ್ದ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಈತ ವಿಡಿಯೋ ರೆಕಾರ್ಡ್ ಮಾಡಲು ಬಳಸುತ್ತಿದ್ದ ಮೊಬೈಲ್ ಫೋನ್ ಮತ್ತು ಆತ ಧರಿಸಿದ್ದ ಮುಸುಕುಗೆ ಬಳಸಲಾದ ವಸ್ತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 354 (ಸಿ), 419 (ಸೋಗು ಹಾಕುವಿಕೆ) ಮತ್ತು 66 (ಇ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈತ ಬೇರೆ ಬೇರೆ ಸಂಸ್ಥೆಗಳಿಗೆ ತೆರಳಿ ವಿಡಿಯೋ ಸೆರೆ ಹಿಡಿದಿದ್ದಾನಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಎಂಎ ಮತ್ತು ಬಿಟೆಕ್ ಪದವೀಧರರಾಗಿದ್ದು, ಕೊಚ್ಚಿ ಇನ್ಫೋಪಾರ್ಕ್‌ನ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.
ಇದನ್ನು ಓದಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 30 ವರ್ಷದ ವ್ಯಕ್ತಿ