ಕಿಶ್ತ್ವಾರ್ (ಜಮ್ಮು ಮತ್ತು ಕಾಶ್ಮೀರ) : ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಕಿಶ್ತ್ವಾರ್‌ನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.5 ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ಈ ಪ್ರದೇಶದಲ್ಲಿ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ್ದರಿಂದ ಸ್ಥಳೀಯಲ್ಲಿ ಆತಂಕ ಮನೆಮಾಡಿತ್ತು. ಭೂಕಂಪದಿಂದ ಇದುವರೆಗೆ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಹಾನಿ ಆಗಿರುವ ವರದಿಯಾಗಿಲ್ಲ. ಈ ಹಿಂದೆಯೂ ಕೂಡ ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಭೂಕಂಪದ ಅನುಭವವಾಗಿರುವ ಪ್ರಕರಣಗಳು ಜರುಗಿವೆ.
ಇನ್ನು ಭಾನುವಾರ ಬೆಳಗ್ಗೆ ನೇಪಾಳದಲ್ಲಿ ಮತ್ತೊಂದು 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಜಧಾನಿ ಕಠ್ಮಂಡುವಿನಿಂದ ಪಶ್ಚಿಮಕ್ಕೆ 55 ಕಿಮೀ ದೂರದಲ್ಲಿರುವ ಧಾಡಿಂಗ್ನಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಘಟನೆಯಿಂದಾಗಿ ಸುಮಾರು ಎರಡು ಡಜನ್ ಮನೆಗಳು ಹಾನಿಗೊಳಗಾಗಿವೆ. ಮ್ಯಾನ್ಮಾರ್‌ನ ಐಜ್ವಾಲ್‌ನಲ್ಲಿಯೂ ಭೂಕಂಪನದ ಅನುಭವವಾಗಿದೆ.
ಮ್ಯಾನ್ಮಾರ್ನಲ್ಲೂ 4.3 ರಷ್ಟು ತೀವ್ರತೆಯ ಭೂಕಂಪ: ಮತ್ತೊಂದೆಡೆ, ಭಾನುವಾರ ಸಂಜೆ 5:18ರ ಸುಮಾರಿಗೆ ಮ್ಯಾನ್ಮಾರ್‌ನಲ್ಲಿ ಮತ್ತೊಂದು ಭೂಕಂಪ ಸಂಭವಿಸಿದ್ದು, 4.3 ತೀವ್ರತೆ ದಾಖಲಾಗಿದೆ. 90 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರವು ಮಾಹಿತಿ ನೀಡಿದೆ.
ಇನ್ನು ಕಳೆದ ಭಾನುವಾರ (ಅಕ್ಟೋಬರ್ 15 ರಂದು) ದೆಹಲಿ ಮತ್ತು ಹರಿಯಾಣದ ಫರಿದಾಬಾದ್‌ನಲ್ಲಿ ಭೂಕಂಪನದ ಅನುಭವವಾಗಿತ್ತು. ಫರಿದಾಬಾದ್‌ನಲ್ಲಿ ಸಂಜೆ 4.8 ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 3.1 ರಷ್ಟು ತೀವ್ರತೆಯ ಕಂಪನ ದಾಖಲಾಗಿತ್ತು. ಭೂಕಂಪನದ ಕೇಂದ್ರ ಬಿಂದು ಫರಿದಾಬಾದ್‌ನಿಂದ 9 ಕಿಲೋಮೀಟರ್ ಪೂರ್ವಕ್ಕೆ ಮತ್ತು ದೆಹಲಿಯಿಂದ 30 ಕಿಲೋಮೀಟರ್ ಆಗ್ನೇಯದಲ್ಲಿತ್ತು. ಭೂಮಿ ನಡುಗಿದ ಕೂಡಲೇ ಜನರು ಆತಂಕಗೊಂಡು ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದರು.
ಇದನ್ನೂ ಓದಿ : ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನ : ವಿಡಿಯೋ
ಹಾಗೆಯೇ, ಅಕ್ಟೋಬರ್ 3 ರಂದು ನೇಪಾಳದಲ್ಲಿ 5 ಕಿ.ಮೀ ಆಳದಲ್ಲಿ ಪ್ರಬಲ 6.2 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಪರಿಣಾಮ ದೆಹಲಿ ಎನ್‌ಸಿಆರ್, ಉತ್ತರ ಪ್ರದೇಶದ ನೋಯ್ಡಾದಲ್ಲಿ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಹಾಗೆಯೇ, ಅಂದು ಮಧ್ಯಾಹ್ನ 2.24ಕ್ಕೆ ಮತ್ತೊಮ್ಮೆ ಭೂಮಿ ಕಂಪಿಸಿದ್ದು, 10 ಕಿಲೋ ಮೀಟರ್ ಆಳದಲ್ಲಿ ರಿಕ್ಟರ್ ಮಾಪನದಲ್ಲಿ 4.6 ತೀವ್ರತೆಯ ಕಂಪನ ದಾಖಲಾಗಿತ್ತು.
ಇದನ್ನೂ ಓದಿ : ನೇಪಾಳದಲ್ಲಿ 6.1 ತೀವ್ರತೆಯ ಭೂಕಂಪನ.. ನಲುಗಿದ ಕಠ್ಮಂಡು