ಪಾಟ್ನಾ (ಬಿಹಾರ) : ರಾಜಕೀಯ ಧುರೀಣರು, ಗಣ್ಯ ವ್ಯಕ್ತಿಗಳಿಗೆ ನೀಡಲಾಗುವ ಝೀರೋ ಟ್ರಾಫಿಕ್ ಸೌಲಭ್ಯ ಕೆಲವೊಮ್ಮೆ ಅನಾಹುತವನ್ನೇ ಸೃಷ್ಟಿಸುತ್ತದೆ. ಅಗತ್ಯವಿದ್ದಾಗ ಇದರ ಬಳಕೆ ಉಚಿತವೇನೋ ಸರಿ. ಆದರೆ, ಆಂಬ್ಯುಲೆನ್ಸ್ ನಿಲ್ಲಿಸಿ ತೊಂದರೆ ನೀಡುವುದು ಅಕ್ಷಮ್ಯ. ಇಂಥದ್ದೇ ಘಟನೆ ಬಿಹಾರದಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್ ಆಗಿದೆ.
ಸಿಎಂ ನಿತೀಶ್ ಕುಮಾರ್ ಅವರ ಬೆಂಗಾವಲು ಪಡೆಗೆ ದಾರಿ ಮಾಡಿಕೊಡುವ ಭರದಲ್ಲಿ ಪೊಲೀಸರು ತುರ್ತು ಅಗತ್ಯವಿದ್ದ ರೋಗಿಯ ಆಂಬ್ಯುಲೆನ್ಸ್ ನಿಲ್ಲಿಸಿದ್ದಾರೆ. ರೋಗಿಯ ಕುಟುಂಬಸ್ಥರು ತುರ್ತಾಗಿ ಆಸ್ಪತ್ರೆಗೆ ತೆರಳಬೇಕು ಎಂದು ಕೇಳಿಕೊಂಡರೂ ಪೊಲೀಸರು ಮಾತ್ರ ಸಿಎಂ ಹೋಗುವವರೆಗೂ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಇದು ಟೀಕೆಗೆ ಗುರಿಯಾಗಿದೆ.
ಸೇತುವೆ ಮೇಲೆ ಆಂಬ್ಯುಲೆನ್ಸ್ಗೆ ತಡೆ: ನಿತೀಶ್ ಕುಮಾರ್ ಅವರು ಪಾಟ್ನಾದಲ್ಲಿ ಯಾವುದೇ ಕಾರ್ಯದ ನಿಮಿತ್ತ ತೆರಳುತ್ತಿದ್ದರು. ಈ ವೇಳೆ ಗೈಘಾಟ್ ಸೇತುವೆಯ ಬಳಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಸಲು ಪೊಲೀಸರು ಎದುರು ಸಂಚಾರವನ್ನು ನಿಲ್ಲಿಸಿದ್ದಾರೆ. ಇದರಿಂದ ವಾಹನ ದಟ್ಟಣೆ ಉಂಟಾಗಿದೆ. ಇದೇ ವೇಳೆ ಮೂರ್ಛೆ ಹೋಗಿದ್ದ ರೋಗಿಯನ್ನು ಕುಟುಂಬಸ್ಥರೊಬ್ಬರು ಆಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಬಂದಿದ್ದರು.
ಝೀರೋ ಟ್ರಾಫಿಕ್ನಿಂದಾಗಿ ವಾಹನಗಳ ಮಧ್ಯೆ ಆಂಬ್ಯುಲೆನ್ಸ್ ಸಿಕ್ಕಿಹಾಕಿಕೊಂಡಿತ್ತು. ತುರ್ತಾಗಿ ರೋಗಿಯನ್ನು ಆಸ್ಪತ್ರೆಗೆ ಸೇರಿಸುವ ಸಲುವಾಗಿ ಕುಟುಂಬಸ್ಥರು ಪೊಲೀಸರು ಬಳಿ ಕೇಳಿಕೊಂಡಿದ್ದಾರೆ. ಆದರೆ, ಇದನ್ನು ಆರಕ್ಷಕರು ನಿರಾಕರಿಸಿದ್ದಾರೆ. ಸಿಎಂ ಬೆಂಗಾವಲು ಪಡೆ ಬರುವ ಕಾರಣ ಆಂಬ್ಯುಲೆನ್ಸ್ ಅನ್ನು ಅಲ್ಲಿಯೇ ತಡೆದಿದ್ದಾರೆ. ರೋಗಿಯ ಕುಟುಂಬಸ್ಥರು ಕಣ್ಣೀರು ಹಾಕಿ ಕೇಳಿಕೊಂಡರು ಬಿಡದೇ ಪೊಲೀಸರು ನಿಷ್ಕರುಣೆಯಿಂದ ನಡೆದುಕೊಂಡ ಆರೋಪ ಕೇಳಿಬಂದಿದೆ.
ಎಂಥದ್ದೇ ಸಂದರ್ಭವಿದ್ದರೂ, ತುರ್ತು ಅಗತ್ಯವಿರುವ ಆಂಬ್ಯುಲೆನ್ಸ್ಗಳನ್ನು ನಿಲ್ಲಿಸುವ ಹಾಗಿಲ್ಲ. ಆದರೆ, ಸಿಎಂಗಾಗಿ ರೋಗಿ ಇರುವ ಆಂಬ್ಯುಲೆನ್ಸ್ ಅನ್ನು ತಡೆದಿದ್ದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಟೀಕೆಗೆ ಆಹಾರವಾಗಿದೆ.
ಹಿಂದಿನ ಪ್ರಕರಣ: ಮೂರು ದಿನಗಳ ಹಿಂದೆಯೂ ನಿತೀಶ್ ಕುಮಾರ್ ಅವರ ತವರು ಜಿಲ್ಲೆ ನಳಂದದಲ್ಲಿ ಇದೇ ರೀತಿಯ ಪ್ರಕರಣ ಮುನ್ನೆಲೆಗೆ ಬಂದಿತ್ತು. ಸಿಎಂ ಆಗಮನದಿಂದ ಉಂಟಾದ ವಾಹನ ದಟ್ಟಣೆಯಿಂದಾಗಿ, ಅದರಲ್ಲಿ ಸಿಲುಕಿ ರೋಗಿಯೊಬ್ಬರು ಆಂಬ್ಯುಲೆನ್ಸ್‌ನಲ್ಲಿಯೇ ಸಾವನ್ನಪ್ಪಿದ್ದರು.
ದಾರಿ ಮಾಡಿಕೊಟ್ಟಿದ್ದ ಪ್ರಧಾನಿ ಮೋದಿ: ಹಿಮಾಚಲಪ್ರದೇಶ ಚುನಾವಣೆಯ ವೇಳೆ ಪ್ರಚಾರಕ್ಕಾಗಿ ತೆರಳುತ್ತಿದ್ದ ವೇಳೆ ಆಂಬ್ಯುಲೆನ್ಸ್ಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ವಾಹನಗಳನ್ನು ನಿಲ್ಲಿಸಿದ್ದ ವಿಡಿಯೋ ವೈರಲ್ ಆಗಿತ್ತು. ವಿಧಾನಸಭಾ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಕಾಂಗ್ರಾ ಜಿಲ್ಲೆಗೆ ಹೊರಟಿದ್ದಾಗ ದಾರಿಯಲ್ಲಿ ಆಂಬ್ಯುಲೆನ್ಸ್ ಬಂದಿತ್ತು. ಇದನ್ನು ಗಮನಿಸಿದ ಮೋದಿ ತಮ್ಮ ಬೆಂಗಾವಲು ವಾಹನವನ್ನು ನಿಲ್ಲಿಸುವಂತೆ ಸೂಚಿಸಿ, ಮೊದಲು ಆಂಬ್ಯುಲೆನ್ಸ್ ಹೋಗಲು ಅವಕಾಶ ಮಾಡಿಕೊಟ್ಟರು. ಆಂಬ್ಯುಲೆನ್ಸ್ ಹೋದ ನಂತರ ಪ್ರಧಾನಿ ಬೆಂಗಾವಲು ಪಡೆ ಚುನಾವಣಾ ಪ್ರಚಾರಕ್ಕೆ ತೆರಳಿತ್ತು.
ಇದನ್ನೂ ಓದಿ: ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಡಲು ಬೆಂಗಾವಲು ವಾಹನ ತಡೆದು ನಿಲ್ಲಿಸಿದ ಮೋದಿ-ವಿಡಿಯೋ