ಕೋಯಿಕ್ಕೋಡ್ (ಕೇರಳ): ಆಂಬ್ಯುಲೆನ್ಸ್ ಬಾಗಿಲು ತೆರೆಯಲು ತಡವಾದ ಪರಿಣಾಮ ಗಾಯಾಳು ಸಾವನ್ನಪ್ಪಿದ ಘಟನೆ ಕೆರಳದಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಬಾಗಿಲು ತೆಗೆಯಲು ಆಗದೇ ಅರ್ಧಗಂಟೆ ತಡವಾದ ಕಾರಣ ಆಂಬ್ಯುಲೆನ್ಸ್ನಲ್ಲೇ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಕರುವಂತುರುತಿ ಮೂಲದ ಫಿರೋಕ್‌ನ ಕೋಯಾಮೋನ್(66) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ಸ್ಕೂಟರ್ ಡಿಕ್ಕಿ ಹೊಡೆದು ಕೋಯಾಮೋನ್ ಅವರನ್ನು ಬೀಚ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಗಾಯ ಗಂಭೀರವಾಗಿದ್ದರಿಂದ ವೈದ್ಯರ ಸಲಹೆಯಂತೆ ಆಂಬ್ಯುಲೆನ್ಸ್‌ನಲ್ಲಿ ಕೋಯಮನ್‌ರನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಮೆಡಿಕಲ್ ಕಾಲೇಜು ತಲುಪಿ ಅರ್ಧ ಗಂಟೆ ಕಳೆದರೂ ಆಂಬ್ಯುಲೆನ್ಸ್ ಬಾಗಿಲು ತೆರೆಯಲಾಗಲಿಲ್ಲ. ನಂತರ ಕೊಡಲಿಯಿಂದ ಬಾಗಿಲು ಒಡೆದು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ತಕ್ಷಣ ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. ಆಂಬ್ಯುಲೆನ್ಸ್‌ನಲ್ಲಿ ಒಬ್ಬ ವೈದ್ಯ ಮತ್ತು ಕೊಯಮೊನ್‌ನ ಇಬ್ಬರು ಸ್ನೇಹಿತರು ಇದ್ದರು. ಘಟನೆಯ ನಂತರ ಆರೋಗ್ಯ ಇಲಾಖೆ ತನಿಖೆ ಆರಂಭಿಸಿದೆ. ಬೀಚ್ ಆಸ್ಪತ್ರೆ ಆರ್‌ಎಂಒ ತನಿಖೆಯ ಉಸ್ತುವಾರಿ ವಹಿಸಿದ್ದಾರೆ. ಬೀಚ್ ಆಸ್ಪತ್ರೆಯ ಆಂಬ್ಯುಲೆನ್ಸ್ 20 ವರ್ಷ ಹಳೆಯದಾದ ಕಾರಣ ಸಮಸ್ಯೆ ಆಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಇಬ್ಬರು ಪ್ರಯಾಣಿಕರ ಸಾವು, ಚಾಲಕ ನಾಪತ್ತೆ