ಮುಂಬೈ: ಪ್ರಪಂಚದ ಕೆಲವು ದೇಶಗಳಲ್ಲಿ ಕಂಡು ಬಂದಿರುವ ಕೊರೊನಾ ರೂಪಾಂತರಿ ಒಮಿಕ್ರಾನ್ ಮುಂಬೈನಲ್ಲೂ ಆತಂಕ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಮಹಾಪರಿನಿರ್ವಾಣ ದಿನದಂದು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಇದ್ದಲ್ಲಿಯೇ ನಮಸ್ಕರಿಸಬೇಕು ಎಂದು ಬಹುಜನ ಮುಖಂಡ ಪ್ರಕಾಶ್ ಅಂಬೇಡ್ಕರ್ ಜನರಿಗೆ ಮನವಿ ಮಾಡಿದ್ದಾರೆ.
ಚೈತ್ಯಭೂಮಿಗೆ ಜನರು ಬರಲು ಮಹಾನಗರ ಪಾಲಿಕೆ ಕೆಲವು ನಿಯಮಗಳನ್ನು ಹೊರಡಿಸಿದೆ. ಈ ನಡುವೆ ಮಾತನಾಡಿರುವ ಪ್ರಕಾಶ್ ಅಂಬೇಡ್ಕರ್, ಕೊರೊನಾದಿಂದಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಗಮನಹರಿಸಿ, ಹೊಸ ರೂಪಾಂತರದ ಬಗ್ಗೆ ಯಾರೂ ಊಹೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಿಗೆ ಆಗಮಿಸದೇ ತಾವು ಇದ್ದಲ್ಲಿಯೇ ವಂದಿಸಿಬೇಕು ಎಂದರು.
ಇದನ್ನೂ ಓದಿ: ಭಾರತಕ್ಕೆ ಲಗ್ಗೆ ಹಾಕಿದ ರೂಪಾಂತರಿ: ಕರ್ನಾಟಕದಲ್ಲಿ ಎರಡು ಒಮಿಕ್ರೋನ್ ಕೇಸ್ ಪತ್ತೆ
ಮಹಾಪರಿನಿರ್ವಾಣ ದಿನದಂದು ಮುಂಬೈಗೆ ಬರಬೇಕಾ ಅಥವಾ ಬೇಡವಾ ಎಂಬ ಚರ್ಚೆಯ ನಡುವೆ ಅವರು ಈ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ರೈಲುಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಎಸ್ಟಿ ಮುಷ್ಕರ ನಡೆಯುತ್ತಿದೆ. ಇದೇ ಸಮಯದಲ್ಲಿ ಕೊರೊನಾದ ಹೊಸ ರೂಪಾಂತರದ ಭಯ ಬೇರೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಚೈತ್ಯಭೂಮಿಗೆ ಬರುವುದನ್ನು ತಪ್ಪಿಸೋಣ ಎಂದರು.
ಚೈತ್ಯಭೂಮಿಯಲ್ಲಿರುವ ಬಾಬಾಸಾಹೇಬರ ಸ್ಮಾರಕಕ್ಕೆ ಗೌರವ ಸಲ್ಲಿಸಲು ಬರುವ ಮುಖಂಡರು ಹಾಗೂ ಗಣ್ಯರು ಎರಡು ಡೋಸ್ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಯಾವುದೇ ಲಸಿಕೆ ಪ್ರಮಾಣಪತ್ರವಿಲ್ಲದಿದ್ದರೆ, ಅಂತಹ ಗಣ್ಯರನ್ನು ಆವರಣ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಸೂಚನೆಗಳ ಪ್ರಕಾರ, ದಾದರ್‌ನ ಚೈತ್ಯಭೂಮಿ ಮತ್ತು ಶಿವಾಜಿ ಪಾರ್ಕ್ ಪ್ರದೇಶದಲ್ಲಿ ಯಾವುದೇ ಸ್ಟಾಲ್‌ಗಳನ್ನು ಸ್ಥಾಪಿಸಲಾಗುವುದಿಲ್ಲ.
ಪ್ರತಿ ವರ್ಷ ಡಿಸೆಂಬರ್ 6ರಂದು, ಲಕ್ಷಾಂತರ ಜನರು ದಾದರ್‌ನ ಚೈತ್ಯಭೂಮಿಗೆ ಗೌರವ ಸಲ್ಲಿಸಲು ಸೇರುತ್ತಾರೆ. ಆದರೆ, ಕೊರೊನಾ ನಂತರ ಮಹಾಪರಿನಿರ್ವಾಣ ದಿನದದಂದು ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ವರ್ಷವೂ ಸರ್ಕಾರ ಸಂಪೂರ್ಣ ನಿಷೇಧ ಹೇರಿಲ್ಲ, ಆದರೆ, ಕೊರೊನಾ ಲಸಿಕೆ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದೆ.