ನವದೆಹಲಿ: ಅಮೆಜಾನ್ ಮತ್ತು ಫ್ಯೂಚರ್ ರಿಟೇಲ್ ನಡುವಿನ ಸಂಘರ್ಷ ಮುಂದುವರೆದಿದೆ. ಅಮೆಜಾನ್ ನಮ್ಮನ್ನು ನಾಶಮಾಡಲು ಬಯಸಿ, ಅದರಲ್ಲಿ ಯಶಸ್ವಿಯಾಗಿದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಫ್ಯೂಚರ್ ರಿಟೇಲ್ ಹೇಳಿದ್ದು, ಮುಂದಿನ ವಿಚಾರಣೆ ಏಪ್ರಿಲ್ 4ಕ್ಕೆ ನಿಗದಿಯಾಗಿದೆ.
ಅಮೆಜಾನ್ ಮತ್ತು ಫ್ಯೂಚರ್ ರಿಟೇಲ್ ನಡುವಿನ ಒಪ್ಪಂದಗಳ ಸಂಬಂಧ ಸಂಘರ್ಷ ಉಂಟಾಗಿದೆ. ತನ್ನೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಿ ರಿಲಯನ್ಸ್ ರಿಟೇಲ್ ಜತೆಗೆ ಆಸ್ತಿ ಮಾರಾಟ ಮಾಡುವ ಒಪ್ಪಂದವನ್ನು ಫ್ಯೂಚರ್ ರಿಟೇಲ್ ಮಾಡಿಕೊಂಡಿದೆ ಎಂದು ಅಮೆಜಾನ್ ಆರೋಪಿಸಿದೆ. ಇದನ್ನು ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳುವ ಯತ್ನವನ್ನು ಎರಡು ಕಂಪನಿಗಳು ಮಾಡಿದ್ದವು. ಆದರೆ, ಅದು ಸಾಧ್ಯವಾಗದೇ ಈಗ ಕಾನೂನು ಹೋರಾಟಕ್ಕೆ ಇಳಿದಿವೆ.
ಅಮೆಜಾನ್ 1,400 ಕೋಟಿ ರೂ.ಗಳಿಗಾಗಿ (ಅಮೆಜಾನ್-ಫ್ಯೂಚರ್ ವಿವಾದಿತ ಒಪ್ಪಂದದ ಮೌಲ್ಯ) 26,000 ಕೋಟಿ ರೂ. ಮೌಲ್ಯದ ನಮ್ಮ ಕಂಪನಿಯನ್ನು ನಾಶಪಡಿಸಿದೆ. ಈ ಮೂಲಕ ತಾನು ಬಯಸಿದ್ದನೇ ಅಮೆಜಾನ್ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಫ್ಯೂಚರ್ ರಿಟೇಲ್ ಹೇಳಿದೆ.
ಅಲ್ಲದೇ, ಈಗ ನಾವು ದಾರದೊಂದಿಗೆ ನೇತಾಡುತ್ತಿದ್ದೇವೆ. ಈಗ ಯಾರೂ ನಮ್ಮೊಂದಿಗೆ ವ್ಯಾಪಾರ ಮಾಡಲು ಬಯಸುವುದಿಲ್ಲ. ಜಮೀನಿನ ಮಾಲೀಕ ತೆರವಿನ ನೋಟಿಸ್ ನೀಡಿದಾಗ ನಾವು ಏನು ಮಾಡಬೇಕೆಂದೂ ಫ್ಯೂಚರ್ ರಿಟೇಲ್ ಅವಲತ್ತುಕೊಂಡಿದೆ. ಜತೆಗೆ 835ಕ್ಕೂ ಹೆಚ್ಚು ಮಳಿಗೆಗಳ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದೇವೆ. ಉಳಿದ 374 ಮಳಿಗೆಗಳನ್ನು ಒಂದೇ ಹಳಿ ಮತ್ತು ಮನವಿ ಮೇಲೆ ನಡೆಸುತ್ತಿದ್ದೇವೆ ಎಂದು ತಿಳಿಸಿದೆ.
ಇನ್ನು, ಫ್ಯೂಚರ್ ರಿಟೇಲ್ ಬೇರೆಯವರಿಗೆ ತನ್ನ ಮಳಿಗೆಗಳನ್ನು ಬಿಟ್ಟುಕೊಡುವ ಬಗ್ಗೆಯೂ ಅಮೆಜಾನ್ ತಕರಾರು ತೆಗೆದಿದೆ. ಇದಕ್ಕೆ ಫ್ಯೂಚರ್ ರಿಟೇಲ್, ಬಾಡಿಗೆ ಕಟ್ಟಲು ಸಾಧ್ಯವಾಗಿಲ್ಲ. ಹೀಗಾಗಿ ಮಳಿಗೆಗಳನ್ನು ಬಿಟ್ಟುಬಿಡಬೇಕಾಯಿತು ಎಂದು ಹೇಳಿದೆ. ಆದರೆ, ಹಣದ ಕೊರತೆ ಮತ್ತು ಬಾಡಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂಬ ಫ್ಯೂಚರ್‌ನ ವಾದ ಕೇವಲ ನೆಪವಾಗಿದೆ ಎಂದು ಅಮೆಜಾನ್ ಆರೋಪಿಸಿದೆ.
ಇದನ್ನೂ ಓದಿ: ಈ ಗ್ರಾಮದಲ್ಲಿದ್ದಾರೆ ಅಮೆರಿಕ, ಆಫ್ರಿಕಾ, ಜಪಾನ್ ಸಹೋದರರು..ಇವರಿಗೆ ಉಕ್ರೇನ್-ರಷ್ಯಾ ಯುದ್ಧದ್ದೇ ಚಿಂತೆ