ನವದೆಹಲಿ: ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ವಿಲೀನಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿಯನ್ನ ಅಲ್ಲೇ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿನ ಅಮರ್ ಚಕ್ರದಲ್ಲಿ ವಿಲೀನಗೊಳಿಸಲಾಗಿದೆ.
1947ರ ಬಳಿಕ ನಡೆದ ಭಾರತ-ಪಾಕಿಸ್ತಾನ ಯುದ್ಧ ಮತ್ತು ಚೀನಾ ಜತೆಗಿನ ಸಂಘರ್ಷದ ವೇಳೆ ಹುತಾತ್ಮರಾಗಿರುವ ಭಾರತೀಯ ಯೋಧರ ನೆನಪಿಗಾಗಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸಲಾಗಿದ್ದು, ಇದೀಗ ಅದರೊಳಗೆ ಅಮರ್ ಜವಾನ್ ಜ್ಯೋತಿ ವಿಲೀನ ಮಾಡಲಾಗಿದೆ.
ದೇಶಕ್ಕಾಗಿ ಅಮರರಾಗಿರುವ ಯೋಧರ ಗೌರವ ಸೂಚಕವಾಗಿ ಕಳೆದ 50 ವರ್ಷಗಳಿಂದ ಅಮರ್ ಜವಾನ್ ಜ್ಯೋತಿ ಉರಿಯುತ್ತಿದ್ದು, ಗಣರಾಜ್ಯೋತ್ಸವಕ್ಕೆ ಕೆಲ ದಿನಗಳು ಬಾಕಿ ಇರುವಾಗಲೇ ಇಂತಹದೊಂದು ಮಹತ್ವದ ಬೆಳವಣಿಗೆ ನಡೆದಿದೆ. ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ, ಏರ್ ಮಾರ್ಷಲ್ ಬಲಭದ್ರ ರಾಧಾಕೃಷ್ಣ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.
ಅಮರ್ ಜವಾನ್ ಜ್ಯೋತಿಯ ಸಮೀಪದಲ್ಲೇ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ ಮಾಡಲಾಗಿದ್ದು, ಇದೀಗ ವಿಲೀನವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದನ್ನೂ ಓದಿರಿ: ಅಮರ ಜವಾನ್ ಜ್ಯೋತಿ ನಂದಿಸಲ್ಲ, ವಿಲೀನವಷ್ಟೇ: ಕೇಂದ್ರ ಸರ್ಕಾರದ ಸ್ಪಷ್ಟನೆ
ವಿರೋಧ ಪಕ್ಷಗಳಿಂದ ಟೀಕೆ
ಈ ಬೆಳವಣಿಗೆಗೆ ಸಂಬಂಧಿಸಿದಂತೆ ವಿಪಕ್ಷ ನಾಯಕರು ಟೀಕೆ ವ್ಯಕ್ತಪಡಿಸಿದ್ದಾರೆ. ಅಮರ ಜವಾನ್ ಜ್ಯೋತಿಯನ್ನು ನಂದಿಸುವ ವರದಿಗಳನ್ನು ಆಧರಿಸಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಮ್ಮ ವೀರ ಸೈನಿಕರ ಪ್ರತೀಕವಾಗಿ ಉರಿಯುತ್ತಿದ್ದ ಅಮರ ಜ್ವಾಲೆಯನ್ನು ಇಂದು ನಂದಿಸುತ್ತಿರುವುದು ಅತ್ಯಂತ ದುಃಖದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ