ಚೆನ್ನೈ: ಬೀದಿ ನಾಯಿಗಳನ್ನು ಕೊಂದ ಆರೋಪದ ಮೇಲೆ ತಮಿಳುನಾಡಿನ ವಿರುಧುನಗರ ಪೊಲೀಸರು ಶಂಕರಲಿಂಗಪುರದ ಪಂಚಾಯತ್ ಅಧ್ಯಕ್ಷೆ ಮತ್ತು ಅವರ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರದೇಶದಲ್ಲಿ ಸುಮಾರು 50 ಬೀದಿ ನಾಯಿಗಳನ್ನು ಕೊಂದು ಹೂತು ಹಾಕಲಾಗಿದೆ ಎಂದು ಪ್ರಾಣಿದಯಾ ಕಾರ್ಯಕರ್ತರೊಬ್ಬರು ಅಮತೂರ್ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ.
50 ನಾಯಿಗಳನ್ನು ಕೊಂದು ಹೂಳಲಾಗಿದೆ ಎಂದು ಮೇನಕಾ ಗಾಂಧಿ ಸ್ಥಾಪಿಸಿದ ಪ್ರಾಣಿ ಹಕ್ಕುಗಳ ಸಂಘಟನೆಯಾದ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಸದಸ್ಯೆಯಾಗಿರುವ ಸಿ. ಸುನಿತಾ ಎಂಬುವರು ದೂರು ನೀಡಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸುನಿತಾ, ಪಂಚಾಯತ್ ಅಧ್ಯಕ್ಷೆ ನಾಗಲಕ್ಷ್ಮಿ ಮತ್ತು ಅವರ ಪತಿ ಮೀನಾಚಿ ಸುಂದರಂ ಅವರು ನಾಯಿಗಳನ್ನು ಕೊಂದಿದ್ದಾರೆ ಎಂಬುದಕ್ಕೆ ಪುರಾವೆ ಸಿಕ್ಕಿದ ಮೇಲೆ ನಾನು ಅವರಿಗೆ ಕರೆ ಮಾಡಿ ವಿಚಾರಿಸಿದ್ದೆ. ನಾಯಿಗಳನ್ನು ತಾವೇ ಕೊಂದಿರುವುದಾಗಿ ಸುಂದರಂ ಹೇಳಿಕೊಂಡಿದ್ದಾರೆ ಎಂದು ಹೇಳಿದರು.
30 ನಾಯಿಗಳ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪಂಚಾಯತ್ ಅಧ್ಯಕ್ಷೆ ಮತ್ತು ಆಕೆಯ ಪತಿ ವಿರುದ್ಧ ಅಮತೂರ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಕಬ್ಬಿಣದ ಕೊಕ್ಕೆಗಳನ್ನು ಬಳಸಿ ನಾಯಿಗಳನ್ನು ಹಿಡಿದು ನಂತರ ಹೊಡೆದು ಸಾಯಿಸಲಾಗಿದೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ.
ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ 1960ರ ಅಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳು ಹೆಚ್ಚು ಕೊಳೆತ ಸ್ಥಿತಿಯಲ್ಲಿರುವುದರಿಂದ ಹೆಚ್ಚಿನ ಶವಗಳ ಶವಪರೀಕ್ಷೆ ನಡೆಸಲಾಗಲಿಲ್ಲ. ಆದಾಗ್ಯೂ ಕೆಲ ನಾಯಿಗಳ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಹೆಚ್ಚಿನ ನಾಯಿಗಳನ್ನು ಹೊಡೆದು ಸಾಯಿಸಲಾಗಿರುವುದು ಬೆಳಕಿಗೆ ಬಂದಿದೆ ಎಂದು ಅಮತೂರ್ ಪೊಲೀಸ್ ಠಾಣೆ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಈಟಿವಿ ಭಾರತ ವರದಿ ಫಲಶೃತಿ: ಬೀದಿನಾಯಿ ಹಿಡಿಯುವ ಕಾರ್ಯಾಚರಣೆಗಿಳಿದ ಹು-ಧಾ ಮಹಾನಗರ ಪಾಲಿಕೆ