ಲಖನೌ: ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿಯ ಕಾಂಪೌಂಡ್‌ನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಸಂಸ್ಥೆ (ಎಎಸ್‌ಐ) ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ. ಸಮೀಕ್ಷೆ ಅನುಮತಿ ನೀಡಿದ್ದ ವಾರಣಾಸಿಯ ತ್ವರಿತ ನ್ಯಾಯಾಲಯದ ಆದೇಶವನ್ನು ರದ್ದು ಮಾಡಲಾಗಿದೆ.
ಯಾವುದಕ್ಕಾಗಿ ಸಮೀಕ್ಷೆ?
ಜ್ಞಾನವಾಪಿ ಮಸೀದಿ ಕಾಂಪ್ಲೆಕ್ಸ್ ಇರುವ ಪ್ರದೇಶದಲ್ಲಿ ಇದಕ್ಕೂ ಮೊದಲು ಯಾವುದಾದರೂ ದೇವಾಲಯ ಇತ್ತೇ ಎಂಬುದನ್ನು ತಿಳಿದುಕೊಳ್ಳಲು ವಾರಣಾಸಿ ಫಾಸ್ಟ್ರಾಕ್ ಕೋರ್ಟ್ ಪುರಾತತ್ವ ಇಲಾಖೆ ಸಮೀಕ್ಷೆಗೆ ಏಪ್ರಿಲ್ 8 ರಂದು ಅನುಮತಿ ನೀಡಿತ್ತು. ಈ ಬಗ್ಗೆ ತ್ವರಿತ ನ್ಯಾಯಲಯದ ಆದೇಶ ಪ್ರಶ್ನಿಸಿ ಉತ್ತರ ಪ್ರದೇಶದ ಸುನ್ನಿ ವಕ್ಫ್ ಬೋರ್ಡ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಕಾಶ್ ಪಾಡಿಯಾ ನೇತೃತ್ವದ ಪೀಠವು ಸಮೀಕ್ಷೆಗೆ ತಡೆ ನೀಡಿ, ತೀರ್ಪನ್ನು ಕಾಯ್ದಿರಿಸಿದೆ.
ಹಲವು ವರ್ಷಗಳ ಹಿಂದಿನ ಪ್ರಕರಣ
ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ಸ್ಥಳದ ವಿವಾದ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯ ವಕೀಲ ವಿಎಸ್ ರಸ್ತೋಗಿ 2019ರ ಡಿಸೆಂಬರ್‌ನಲ್ಲಿ ವಾರಣಾಸಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮೊಘಲ್ ಚಕ್ರವರ್ತಿ ಔರಂಗಜೇಬ್ 1664 ರಲ್ಲಿ 2,000 ವರ್ಷಗಳಷ್ಟು ಹಳೆಯದಾದ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕೆಡವಿ ಮಸೀದಿ ನಿರ್ಮಿಸಿದ್ದ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು. ಮಾತ್ರವಲ್ಲದೆ, ಮಸೀದಿ ಸ್ಥಳದ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಸಂಸ್ಥೆಗೆ (ಎಎಸ್‌ಐ) ಅನುಮತಿ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ, ಅಂಜುಮ್ ಇಂತೆಜಾಮಿಯಾ ಮಸೀದಿ ಸಮಿತಿಯು ಇದನ್ನು ವಿರೋಧಿಸಿ ಅರ್ಜಿ ಸಲ್ಲಿಸಿತ್ತು.
ಇದೇ ಏಪ್ರಿಲ್‌ನಲ್ಲಿ ವಾರಣಾಸಿ ನ್ಯಾಯಾಲಯವು ಸರ್ವೇ ನಡೆಸುವಂತೆ ಸರ್ವೇ ಆಫ್ ಇಂಡಿಯಾಗೆ ಅನುಮತಿ ನೀಡಿತ್ತು. ಜೊತೆಗೆ ಐವರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಇದನ್ನೂ ಓದಿ: ಜ್ಞಾನಾವಪಿ ಮಸೀದಿಯೊಳಗೆ ದೇವರನ್ನು ಪೂಜಿಸಲು ಅನುಮತಿ ವಿಚಾರ : ಪ್ರತಿಕ್ರಿಯೆ ಕೋರಿದ ಕೋರ್ಟ್