ಅಲಹಾಬಾದ್(ಉತ್ತರಪ್ರದೇಶ): ಸಲಿಂಗ ವಿವಾಹವಾಗಿದ್ದ ಇಬ್ಬರು ಯುವತಿಯರು ತಮ್ಮ ವಿವಾಹವನ್ನು ಕಾನೂನಾತ್ಮಕವಾಗಿ ಮಾನ್ಯ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಸಲಿಂಗ ವಿವಾಹ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ಕೋರ್ಟ್ ಹೇಳಿದೆ.
ತನ್ನ 23 ವರ್ಷದ ಮಗಳನ್ನು 22 ವರ್ಷದ ಇನ್ನೊಬ್ಬ ಯುವತಿ ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿದ್ದಾಳೆ. ಅವಳನ್ನು ಆ ಯುವತಿಯ ಮುಷ್ಟಿಯಿಂದ ಬಿಡಿಸಿಕೊಡಿ ಎಂದು ಕೋರಿ ಅಂಜು ದೇವಿ ಎಂಬುವವರು ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕೈಗೆತ್ತಿಕೊಂಡ ಕೋರ್ಟ್ ಈ ಇಬ್ಬರನ್ನೂ ಏಪ್ರಿಲ್ 6 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಅದರಂತೆ ಮರುದಿನವೇ ನ್ಯಾಯಾಲಯದ ಮುಂದೆ ಬಂದ ಇಬ್ಬರು ಯುವತಿಯರು ‘ನಮಗೆ ಮದುವೆಯಾಗಿದೆ. ಅದನ್ನು ಒಪ್ಪಿಕೊಳ್ಳಬೇಕು' ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಅಲ್ಲದೇ, ಹಿಂದೂ ವಿವಾಹ ಕಾನೂನುಗಳು ಸಲಿಂಗ ವಿವಾಹವನ್ನು ವಿರೋಧಿಸುವುದಿಲ್ಲ. ಹೀಗಾಗಿ ತಮ್ಮ ಈ ಮದುವೆಯನ್ನು ಕಾನೂನಾತ್ಮಕವಾಗಿ ಮಾನ್ಯ ಮಾಡಿಕೊಡಬೇಕು ಎಂದು ವಾದ ಮಂಡಿಸಿದ್ದಾರೆ.
ಪವಿತ್ರ ಭಾರತದಲ್ಲಿ ಮದುವೆಯನ್ನು ಸಂಸ್ಕಾರವೆಂದು ಪರಿಗಣಿಸಲಾಗಿದೆ. ಅದು ಪುರುಷ ಮತ್ತು ಮಹಿಳೆಯ ಮಧ್ಯೆಯೇ ನಡೆಯಬೇಕು. ಸಲಿಂಗಿಗಳ ಮದುವೆಯನ್ನು ಕಾನೂನಾತ್ಮಕವಾಗಿ ಪರಿಗಣಿಸಲು ಬರುವುದಿಲ್ಲ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದ್ದಾರೆ. ವಾದ ಆಲಿಸಿದ ಕೋರ್ಟ್ ಈ ಇಬ್ಬರು ಮಹಿಳೆಯರ ವಿವಾಹವನ್ನು ಕಾನೂನುಬಾಹಿರ ಎಂದು ಪರಿಗಣಿಸಿ, ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ: ತಾಯಿಯನ್ನೇ ಗೃಹಬಂಧನದಲ್ಲಿಟ್ಟ ಮಕ್ಕಳು; 22 ವರ್ಷ ಬೆಳಕನ್ನೇ ನೋಡದ ಮಹಿಳೆ!