ನವದೆಹಲಿ : ಕೋವಿಡ್ ಪರಿಸ್ಥಿತಿಯ ನಡುವೆಯೇ ವಾರ್ಷಿಕ ಪರೀಕ್ಷೆಯನ್ನು ಆಯೋಜಿಸಲು ಮುಂದಾಗಿದ್ದ ಆಂಧ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸಿರುವುದಾಗಿ ಜಗನ್ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಈ ಬಗ್ಗೆ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿಯವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ರಾಜ್ಯದ ಪರ ವಕೀಲರಾದ ದುಶ್ಯಂತ್ ದೇವ್, ನಿನ್ನೆಯ ವಿಚಾರಣೆ ಬಳಿಕ ಸಿಎಂ ಜಗನ್ ಮೋಹನ್ ರೆಡ್ಡಿಯವರೊಂದಿಗೆ ನಾನು ಮಾತುಕತೆ ನಡೆಸಿದ್ದೇನೆ. ಇಡೀ ದೇಶವು ಕೊರೊನಾದಿಂದ ತತ್ತರಿಸಿದೆ.
ಇಂಥ ಸಮಯದಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ತಿಳಿಸಿದ್ದೇನೆ. ಹಾಗಾಗಿ, ಪರೀಕ್ಷೆ ರದ್ದು ಮಾಡುವುದಕ್ಕೆ ಅವರೂ ಒಪ್ಪಿದ್ದಾರೆ ಎಂದು ನ್ಯಾಯಮೂರ್ತಿಗಳ ಗಮನಕ್ಕೆ ತಂದರು. ಸರ್ಕಾರದ ಪ್ರಾಯೋಗಿಕ ನಿಲುವನ್ನು ನಾವು ಪ್ರಶಂಸಿಸುತ್ತೇವೆ ಎಂದು ನ್ಯಾಯಮೂರ್ತಿ ಖಾನ್ವಿಲ್ಕರ್ ಹೇಳಿದ್ದಾರೆ. ಕೋವಿಡ್ ಪರಿಸ್ಥಿತಿ ತುಂಬಾ ಕಠಿಣ ಮತ್ತು ಅನಿರೀಕ್ಷಿತ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.