ಕುಪ್ವಾರ( ಜಮ್ಮು-ಕಾಶ್ಮೀರ): ಮಂಗಳವಾರ ಮತ್ತು ಬುಧವಾರ ರಾತ್ರಿ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕ್ರಾಲ್‌ಪೋರಾದಲ್ಲಿ ನೆಲೆಸಿದ್ದ ವಲಸಿಗರ ಕುಟುಂಬದ ಐವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ಮಜೀದ್ ಅನ್ಸಾರಿ ಎಂಬುವವರ ಕುಟುಂಬವು ಕ್ರಾಲ್ಪೋರಾದಲ್ಲಿ ಬಾಡಿಗೆ ವಸತಿಗೃಹದಲ್ಲಿ ನೆಲೆಸಿತ್ತು ಎಂದು ವರದಿಗಳು ತಿಳಿಸಿವೆ. ಸ್ಥಳೀಯರು ಅಸ್ವಸ್ಥಗೊಂಡಿದ್ದ ಇವರನ್ನು ಸ್ಥಳೀಯ ವೈದ್ಯರ ಬಳಿ ದಾಖಲಿಸಿದ್ದರು. ಆದರೆ ಇವರನ್ನು ತಪಾಸಣೆ ನಡೆಸಿದ ವೈದ್ಯರು ಅವರೆಲ್ಲ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಮೃತರಲ್ಲಿ ಅಹ್ಮದ್ ಹುಸೇನ್ ಅವರ ಪುತ್ರ ಮಜೀದ್ ಅನ್ಸಾರಿ (35), ಅವರ ಪತ್ನಿ ಸೋಹಾನಾ ಖಾತೂನ್ (30), ಅವರ ಮಕ್ಕಳಾದ ಫೈಜಾನ್ ಅನ್ಸಾರಿ (4), ಅಬು ಜರ್ (3) ಮತ್ತು ಕೆಲವು ದಿನಗಳ ಮಗು ಕೂಡಾ ಸೇರಿದೆ ಎಂದು ತಿಳಿದು ಬಂದಿದೆ.
ಕುಟುಂಬ ಸದಸ್ಯರ ಸಾವನ್ನು ದೃಢಪಡಿಸಿದ BMO ಕ್ರಾಲ್ಪೋರಾ, ಇದು ಉಸಿರುಗಟ್ಟುವಿಕೆಯಿಂದ ಮರಣ ಹೊಂದಿದ್ದಾರೆ ಎಂದು ಶಂಕಿಸಿದ್ದಾರೆ. ಈ ಎಲ್ಲ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರವೇ ಇವರ ಸಾವಿಗೆ ಕಾರಣ ಏನು ಎಂಬುದು ಗೊತ್ತಾಗಲಿದೆ ಎಂದು ಅಲ್ಲಿನ ವೈದ್ಯಾಧಿಕಾರಿಗಳು ಹೇಳಿದ್ದಾರೆ. ’’ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸುವ ಸಲುವಾಗಿ ಎರಡು ಆಂಬ್ಯುಲೆನ್ಸ್‌ಗಳನ್ನು ಕಳುಹಿಸಿದ್ದೇವೆ. ಮರಣೋತ್ತರ ಪರೀಕ್ಷೆ ಬಳಿಕ ನಮಗೆ ನಿಜವಾದ ವಿವರಗಳು ತಿಳಿದು ಬರಬೇಕಾಗಿದೆ’’ ಎಂದು ಬಿಎಂಒ ಕ್ರಾಲ್ಪೋರಾ ತಿಳಿಸಿದ್ದಾರೆ.
ಇದನ್ನು ಓದಿ: ಶಿವಸಂವಾದ ಯಾತ್ರೆ ವೇಳೆ ಆದಿತ್ಯ ಠಾಕ್ರೆ ಕಾರಿನ ಮೇಲೆ ಕಲ್ಲು ತೂರಾಟ