ಮುಂಬೈ: ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಬಾಲಿವುಡ್ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರಿಗೆ ಭಾನುವಾರ ಅಧಿಕೃತ ಆಹ್ವಾನ ನೀಡಲಾಗಿದೆ.
ನಿರ್ಮಾಪಕ ಮಹಾವೀರ್ ಜೈನ್ ಹಂಚಿಕೊಂಡ ಹೇಳಿಕೆಯ ಪ್ರಕಾರ, ಜನವರಿ 22ರಂದು ನಡೆಯಲಿರುವ ಸಮಾರಂಭದಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಭಾಗವಹಿಸಲಿದ್ದಾರೆ. "ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಸಮಿತಿ ಪ್ರಮುಖರಾದ ಸುನೀಲ್ ಅಂಬೇಕರ್, ಆರ್‌ಎಸ್‌ಎಸ್ ಕೊಂಕಣ ಪ್ರಾಂತ ಪ್ರಚಾರ ಪ್ರಮುಖರಾದ ಅಜಯ್ ಮುಡ್ಪೆ, ನಿರ್ಮಾಪಕ ಮಹಾವೀರ್ ಜೈನ್ ಅವರು ಆಲಿಯಾ ಮತ್ತು ರಣಬೀರ್ ಅವರನ್ನು ಭೇಟಿ ಮಾಡಿ, ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ" ಎಂದು ತಿಳಿಸಿದೆ.
ಕಳೆದ ಕೆಲವು ದಿನಗಳ ಹಿಂದೆ ಹಿರಿಯ ನಟ ರಜನಿಕಾಂತ್ ಅವರು ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಹಾಜರಾಗಲು ವೈಯಕ್ತಿಕವಾಗಿ ಆಹ್ವಾನ ಸ್ವೀಕರಿಸಿದ್ದರು. ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಸನ್ನಿ ಡಿಯೋಲ್, ಪ್ರಭಾಸ್, ಮಾಧುರಿ ದೀಕ್ಷಿತ್, ಅನುಪಮ್ ಖೇರ್ ಮತ್ತು ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ನಟ, ನಟಿಯರು ಕೂಡಾ ಭಾಗವಹಿಸುವ ನಿರೀಕ್ಷೆಯಿದೆ.
ಈಗಾಗಲೇ ರಾಮ ಮಂದಿರದ ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು, ಭಕ್ತರು ಪಾಲ್ಗೊಳ್ಳಲಿದ್ದಾರೆ.