ನವದೆಹಲಿ: ಹಿಜಾಬ್ ವಿವಾದದ ಸಂದರ್ಭದಲ್ಲಿ ಹಿಂದೂ ವಿದ್ಯಾರ್ಥಿಗಳ ಗುಂಪು 'ಜೈಶ್ರೀರಾಮ್' ಎಂದು ಘೋಷಣೆ ಮೊಳಗಿಸಿದ್ದಕ್ಕೆ ಪ್ರತಿಯಾಗಿ 'ಅಲ್ಲಾಹು ಅಕ್ಬರ್' ಎಂದು ಕೂಗಿದ್ದ ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಬಗ್ಗೆ ಅಲ್‌ಖೈದಾ ಮುಖ್ಯಸ್ಥ ಅಮನ್-ಅಲ್-ಜವಾಹಿರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಅಲ್ಲದೇ, ಇಸ್ಲಾಂ ಮೇಲೆ ಆಕ್ರಮಣ ಮಾಡುವುದನ್ನು ನಿಗ್ರಹಿಸಿ ಎಂದೂ ಆತ ಕರೆ ಕೊಟ್ಟಿದ್ದಾನೆ. ಅಲ್ಖೈದಾದ ಮುಖವಾಣಿ ಅಸ್-ಸಾಹಬ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಅಮನ್-ಅಲ್-ಜವಾಹಿರಿ ಮಾತನಾಡಿರುವ 09 ನಿಮಿಷಗಳ ವಿಡಿಯೋ ಶೇರ್ ಮಾಡಲಾಗಿದೆ.
ವಿದ್ಯಾರ್ಥಿನಿಯ ಘೋಷಣೆ ಮೆಚ್ಚುವಂತಹದ್ದು. ಆಕೆ ಜಿಹಾದ್ ಚೈತನ್ಯವನ್ನು ಹುರಿದುಂಬಿಸಿದ್ದಾಳೆ. ಆಕೆಯ ಘೋಷಣೆ ನನ್ನಲ್ಲಿ ಸ್ಫೂರ್ತಿ ತುಂಬಿದೆ. ಆಕೆಗಾಗಿ ನಾನು ಕೆಲವು ಸಾಲುಗಳ ಕವಿತೆ ಬರೆದಿದ್ದೇನೆ. ನನ್ನ ಪದಗಳ ಮೂಲಕ ಕೊಡುವ ಈ ಕೊಡುಗೆಯನ್ನು ಸಹೋದರಿ ಸ್ವೀಕರಿಸುತ್ತಾಳೆ ಎಂದು ನಂಬಿದ್ದೇನೆ ಎಂದು ಆತ ಹೇಳಿದ್ದಾನೆ.
ಇದನ್ನೂ ಓದಿ: 'ಅವರು ಜೈಶ್ರೀರಾಮ್ ಎಂದು ಕೂಗಿದ್ರು, ನಾನು ಅಲ್ಲಾಹು ಅಕ್ಬರ್ ಎಂದು ಕೂಗಿದೆ, ಅವರದ್ದೂ ತಪ್ಪಿಲ್ಲ, ನನ್ನದೂ ತಪ್ಪಿಲ್ಲ'
ಮುಸ್ಕಾನ್ ಖಾನ್ಗಾಗಿ ಬರೆದ ಕವಿತೆಯನ್ನು ಉಗ್ರ ಓದಿದ್ದು, 'ನಾನು ಶರಣಾಗುವುದಿಲ್ಲ. ಧೈರ್ಯದಿಂದ ಹಿಜಾಬ್ ಪರವಾಗಿ ಘೋಷಿಸಿದ್ದೇನೆ. ಹಿಜಾಬ್ ಧರಿಸುವುದು ನನ್ನ ನಂಬಿಕೆಯಿಂದ ಕಲಿತಿರುವೆ. ಹೀಗಾಗಿ ಹಿಜಾಬ್ಗಾಗಿ ಘೋಷಣೆ ಕೂಗಿದೆ' ಎಂದು ಹೇಳಿದ್ದಾನೆ. ಜತೆಗೆ ಪಾಶ್ಚಿಮಾತ್ಯ ಜಗತ್ತಿನಲ್ಲಿ ಕೀಳರಿಮೆಯಿಂದಿರುವ ಮುಸ್ಲಿಂ ಸಹೋದರಿಯರಿಗೆ ಪ್ರಯೋಗಿಕವಾದ ಪಾಠವನ್ನು ಈಕೆ ಕಲಿಸಿದ್ದಾಳೆ. ಇದಕ್ಕೆ ಈಕೆಗೆ ಅಲ್ಲಾಹನು ಹೆಚ್ಚಿನ ಪ್ರತಿಫಲ ನೀಡಲಿ ಎಂದೂ ಹೇಳಿದ್ದಾನೆ.
ಹಿಂದೂ ಭಾರತದ ವಾಸ್ತವ ಮತ್ತು ಅದರ ಅಸಂಸ್ಕೃತ ಪ್ರಜಾಪ್ರಭುತ್ವದ ವಂಚನೆಯನ್ನು ಆಕೆಯ ಬಹಿರಂಗ ಪಡಿಸಿದ್ದಾಳೆ. ಭಾರತ ಉಪಖಂಡದಲ್ಲಿರುವ ನಮ್ಮ ಮುಸ್ಲಿಮರ ಹೋರಾಟವನ್ನು ಜಾಗೃತಗೊಳಿಸಿದ್ದಾಳೆ. ಚೀನಾದಿಂದ ಇಸ್ಲಾಮಿಕ್ ಮಗ್ರೆಬ್ ಮತ್ತು ಕಾಕಸಸ್‌ನಿಂದ ಸೊಮಾಲಿಯಾದವರೆಗೆ ಹಲವಾರು ರಂಗಗಳಲ್ಲಿ ಸಂಘಟಿತ ಹೋರಾಟ ನಡೆಸುವ ಸಮುದಾಯಕ್ಕೆ ಷರಿಯಾವನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಸಮುದಾಯ ಒಂದಾಗುವುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ ಎಂದೂ ತಿಳಿಸಿದ್ದಾನೆ.
ಈ ವಿಡಿಯೋದಲ್ಲಿ ಕಾಣಿಸಿಕೊಳ್ಳುವ ಮೂಲಕ ತಾನು ಇನ್ನೂ ಜೀವಂತ ಇದ್ದೇನೆ ಎಂದು ಜವಾಹಿರಿ ತೋರಿದ್ದಾನೆ. 2011ರಲ್ಲಿ ಲಾಡೆನ್ ಹತ್ಯೆ ನಂತರ ಈತನೇ ಅಲ್‌ಖೈದಾ ನಾಯಕನಾಗಿದ್ದು, 2020ರಲ್ಲಿ ಸಹಜ ಕಾರಣಗಳಿಂದ ಮೃತಪಟ್ಟಿದ್ದಾನೆ ಎನ್ನಲಾಗಿತ್ತು. ಆದರೆ, ಇದೀಗ ಕರ್ನಾಟಕದ ಯುವತಿ ನೆಪದಲ್ಲಿ ಮತ್ತೆ ಜಗತ್ತಿನ ಮುಂದೆ ಬಂದಿದ್ದಾನೆ.
ಇದನ್ನೂ ಓದಿ: ಮುಸ್ಕಾನ್‌ಳನ್ನು ಹಾಡಿ ಹೊಗಳಿದ ಅಲ್‌ಖೈದಾ ಉಗ್ರ: ಸಿಎಂ ಇಬ್ರಾಹಿಂ ಹೇಳಿದ್ದೇನು?