ನವದೆಹಲಿ: ಕೋವಿಡ್‌ನಿಂದಾಗಿ 2020-21ರಲ್ಲಿ ದೇಶದ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಕ್ರಮವಾಗಿ ಸುಮಾರು 19,564 ಮತ್ತು 5,116 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಕೇಂದ್ರ ಸರ್ಕಾರ ಇಂದು ರಾಜ್ಯಸಭೆಗೆ ತಿಳಿಸಿದೆ. ಸಾಂಕ್ರಾಮಿಕ ರೋಗ ವಾಯುಯಾನ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ನಾಗರಿಕ ವಿಮಾನಯಾನ ಇಲಾಖೆ ರಾಜ್ಯ ಸಚಿವ ವಿ.ಕೆ.ಸಿಂಗ್ ನೀಡಿದ ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯನ್ನು ವಿಮಾನಯಾನ ಸಂಸ್ಥೆಗಳಿಗೆ ವಿಸ್ತರಿಸಿದೆ. ಈ ಯೋಜನೆಯು ಸಾಲ ನೀಡುವ ಸಂಸ್ಥೆಗಳಿಗೆ ನೂರರಷ್ಟು ಭದ್ರತೆ ನೀಡುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯವು ಯಾವುದೇ ನಿರ್ಬಂಧವಿಲ್ಲದೆ 2021ರ ಅಕ್ಟೋಬರ್ 18 ರಿಂದ ನಿಗದಿತ ದೇಶೀಯ ವಿಮಾನಗಳ ಹಾರಾಟವನ್ನು ಪುನಾರಂಭಿಸಿದೆ ಎಂದು ಅವರು ಹೇಳಿದರು.
ವಿಮಾನ ದರಗಳನ್ನು ಸರ್ಕಾರ ನಿಯಂತ್ರಿಸುವುದಿಲ್ಲ. ವಿಮಾನ ನಿಯಮಗಳು 1937 ರ ನಿಯಮ 135 ರ ಉಪ ನಿಯಮ (1)ರ ನಿಬಂಧನೆಗಳ ಅಡಿಯಲ್ಲಿ ನಿಗದಿತ ವಿಮಾನ ಸೇವೆಗಳಲ್ಲಿ ತೊಡಗಿರುವ ಪ್ರತಿಯೊಂದು ವಿಮಾನಯಾನ ಸಂಸ್ಥೆಯು ಎಲ್ಲಾ ಸಂಬಂಧಿತ ಸೇವೆಗಳಿಗೆ ದರ ನಿಗದಿ ಮಾಡುತ್ತದೆ ಎಂದು ವಿ.ಕೆ.ಸಿಂಗ್ ರಾಜ್ಯಸಭೆಗೆ ತಿಳಿಸಿದರು.
ಇದನ್ನೂ ಓದಿ: ಮಾರ್ಚ್ 27ರಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ ಪುನಾರಂಭ