ಮುಂಬೈ : ಅಗ್ಗದರದ ವಿಮಾನಯಾನ ಕಂಪನಿ ಏರ್ ಏಷ್ಯಾ, ಪಶ್ಚಿಮ ಬಂಗಾಳಕ್ಕೆ ಹೋಗುವ ಹಾಗೂ ಅಲ್ಲಿಂದ ಬರುವ ವಿಮಾನ ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲೇಶನ್ ಶುಲ್ಕ ಹಾಗೂ ರಿಶೆಡ್ಯೂಲಿಂಗ್ ಶುಲ್ಕಗಳನ್ನು ರದ್ದುಗೊಳಿಸಿದೆ. ಬಂಗಾಳದಲ್ಲಿ 15 ದಿನಗಳ ಕಾಲ ಲಾಕ್ಡೌನ್ ಘೋಷಣೆಯಾದ ಕಾರಣ ಏರ್ ಏಷ್ಯಾ ಈ ಕ್ರಮ ಪ್ರಕಟಿಸಿದೆ.
ಅದೇ ರೀತಿ ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಗುವ ಹಾಗೂ ಅಲ್ಲಿಂದ ಬರುವ ವಿಮಾನಯಾನಗಳಿಗೆ ಇದೇ ರೀತಿಯ ರಿಯಾಯಿತಿ ಕ್ರಮಗಳನ್ನು ಕಂಪನಿ ಈ ಹಿಂದೆಯೇ ಘೋಷಿಸಿದೆ.
ಕರ್ನಾಟಕ, ದೆಹಲಿ ಹಾಗೂ ತಮಿಳುನಾಡುಗಳಲ್ಲಿ ಮೇ 24ರವರೆಗೆ, ಪಶ್ಚಿಮ ಬಂಗಾಳದಲ್ಲಿ ಮೇ 30ರವರೆಗೆ ಹಾಗೂ ಮಹಾರಾಷ್ಟ್ರದಲ್ಲಿ ಜೂನ್ 1ರವರೆಗೆ ಲಾಕ್ಡೌನ್ ಇರಲಿದೆ.
ಲಾಕ್ಡೌನ್ ಆಗುವ ಮುಂಚೆಯೇ ಏರ್ ಏಷ್ಯಾ ವಿಮಾನದಲ್ಲಿ ಸೀಟ್ ಬುಕ್ ಮಾಡಿರುವ ಗ್ರಾಹಕರು ತಮ್ಮ ಬುಕಿಂಗ್ ಕ್ಯಾನ್ಸಲ್ ಮಾಡಬಹುದು ಅಥವಾ ಪ್ರಯಾಣದ ದಿನಾಂಕ, ಸಮಯಗಳನ್ನು ಬದಲಾಯಿಸಿಕೊಳ್ಳಬಹುದು.
ಹೀಗೆ ಸೀಟು ರದ್ದು ಪಡಿಸುವ ಅಥವಾ ಪ್ರಯಾಣದ ದಿನಾಂಕ ಬದಲಾಯಿಸುವ ಪ್ರಕ್ರಿಯೆಗೆ ಯಾವುದೇ ರೀತಿಯ ದಂಡ ಅಥವಾ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಏರ್ ಏಷ್ಯಾ ವಿಮಾನಯಾನ ಸಂಸ್ಥೆ ತಿಳಿಸಿದೆ.
ಗ್ರಾಹಕರು ಸೀಟ್ ಕ್ಯಾನ್ಸಲೇಷನ್ ಅಥವಾ ದಿನಾಂಕ ಬದಲಾವಣೆಗಾಗಿ airasia.co.in ಗೆ ಲಾಗಿನ್ ಆಗಬಹುದು ಅಥವಾ +91 63600 12345 ನಂಬರಲ್ಲಿ ವಾಟ್ಸ್ಆ್ಯಪ್ ಚಾಟಿಂಗ್ ಮಾಡಬಹುದು.