ನವದೆಹಲಿ: ಕಳೆದ ಕೆಲವು ದಿನಗಳಿಂದ ವಿಮಾನಯಾನ ಸಂಸ್ಥೆಗಳ ಲೋಪದೋಷಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಇದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿಮಾನಯಾನ ಸಂಸ್ಥೆಗಳ ಮೇಲೆ ಕ್ರಮ ಕೈಗೊಂಡಿದೆ. ಹೊಸ ಬೆಳವಣಿಗೆಯಲ್ಲಿ ಡಿಜಿಸಿಎ ನಾಗರಿಕ ವಿಮಾನಯಾನ ಅಗತ್ಯತೆ (ಸಿಎಆರ್)ಗೆ ತಿದ್ದುಪಡಿ ಮಾಡಿದೆ. ಪ್ರಯಾಣಿಕರು ಇದರ ಪ್ರಯೋಜನವನ್ನು ನೇರವಾಗಿ ಪಡೆಯಲಿದ್ದಾರೆ. ಹೊಸ ನಿಯಮಗಳು ಫೆಬ್ರವರಿ 15 ರಿಂದ ಜಾರಿಗೆ ಬರಲಿವೆ.
ಹೊಸ ನಿಯಮವೇನು?: ಪ್ರಯಾಣಿಕರ ಒಪ್ಪಿಗೆಯಿಲ್ಲದೇ ಟಿಕೆಟ್ ವರ್ಗವನ್ನು ಡೌನ್‌ಗ್ರೇಡ್ ಮಾಡಲು ವಿಮಾನಯಾನ ಸಂಸ್ಥೆಗಳು ಮುಂದಾಗುತ್ತಿವೆ. ಅಂತಹ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಅಂದರೆ, ಯಾರಾದರೂ ಬಿಸ್ನೆಸ್ ಕ್ಲಾಸ್ ಟಿಕೆಟ್ ತೆಗೆದುಕೊಂಡಿರುತ್ತಾರೆ ಎಂದಿಟ್ಟುಕೊಳ್ಳಿ. ಕೆಲವು ಕಾರಣಕ್ಕಾಗಿ ಪ್ರಯಾಣಿಕರನ್ನು ಬಿಸ್ನೆಸ್ ಕ್ಲಾಸ್ ಹೊರತುಪಡಿಸಿ ಬೇರೆ ಕ್ಲಾಸ್ನಲ್ಲಿ ಕುಳಿತುಕೊಳ್ಳಲು ಸಿಬ್ಬಂದಿ ಮನವಿ ಮಾಡುತ್ತಾರೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ನಾಗರಿಕ ವಿಮಾನಯಾನದ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ. ಇದರ ಪ್ರಕಾರ, ಬಿಸ್ನೆಸ್ ಕ್ಲಾಸ್ ಟಿಕೆಟ್ ಅನ್ನು ಡೌನ್‌ಗ್ರೇಡ್ ಮಾಡಿದಾಗ ವಿಮಾನಯಾನ ಸಂಸ್ಥೆಗಳು ತೆರಿಗೆ ಸೇರಿದಂತೆ ಶೇ 75 ರಷ್ಟು ಹಣವನ್ನು ಪ್ರಯಾಣಿಕರಿಗೆ ಹಿಂತಿರುಗಿಸಬೇಕು. ಅಷ್ಟೇ ಅಲ್ಲ, ಮರುಪಾವತಿಗೆ ವಿಭಿನ್ನ ಷರತ್ತುಗಳನ್ನೂ ಸಹ ನಿಗದಿಪಡಿಸಲಾಗಿದೆ. ಅಂದರೆ, ದೇಶೀಯ ವಿಮಾನಗಳು ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಪ್ರತ್ಯೇಕ ಮರುಪಾವತಿ ಸೌಲಭ್ಯಗಳು ಸಿಗುತ್ತವೆ.
ಪರಿಷ್ಕೃತ ನಿಯಮಗಳ ಪ್ರಕಾರ..: ದೇಶೀಯ ವಲಯಕ್ಕೆ ತೆರಿಗೆ ಸೇರಿದಂತೆ ಟಿಕೆಟ್ ದರದ ಶೇ. 75 ರಷ್ಟು ಮರುಪಾವತಿಯಾಗುವುದು. ಅಂತಾರಾಷ್ಟ್ರೀಯ ವಲಯಕ್ಕೆ 1,500 ಕಿ.ಮೀ ಅಥವಾ ಅದಕ್ಕಿಂತ ಕಡಿಮೆ ದೂರದ ವಿಮಾನಗಳಿಗೆ ತೆರಿಗೆ ಸೇರಿದಂತೆ ಟಿಕೆಟ್ ಬೆಲೆಯ ಶೇ. 30ರಷ್ಟು ಮರುಪಾವತಿಯಾಗುತ್ತದೆ. 1,500 ಕಿ.ಮೀ.ಗಳಿಂದ 3,500 ಕಿ.ಮೀ ನಡುವಿನ ವಿಮಾನಗಳಿಗೆ ತೆರಿಗೆ ಸೇರಿದಂತೆ ಟಿಕೆಟ್ ದರದ ಶೇ. 50ರಷ್ಟು ಹಣ ಮರುಪಾವತಿಯಾಗಲಿದೆ. 3,500 ಕಿ.ಮೀ.ಗಿಂತ ಹೆಚ್ಚಿನ ವಿಮಾನಗಳಿಗೆ ತೆರಿಗೆ ಸೇರಿದಂತೆ ಟಿಕೆಟ್ ಬೆಲೆಯ ಶೇ. 75 ರಷ್ಟು ಹಣ ವಿಮಾನಯಾನ ಕಂಪನಿಗಳು ಹಿಂದಿರುಗಿಸುತ್ತವೆ.
ಏರ್ ಇಂಡಿಯಾಗೆ ದಂಡ: ಪ್ರಯಾಣಿಕನೋರ್ವ ತನ್ನ ಸಹ ಪ್ರಯಾಣಿಕ ಮಹಿಳೆಯ ಮೈಮೇಲೆ ಮೂತ್ರ ವಿಸರ್ಜಿಸಿದ ಘಟನೆಯನ್ನು ತನಗೆ ತಿಳಿಸಿಲ್ಲ ಎಂಬ ಕಾರಣಕ್ಕೆ ಡಿಜಿಸಿಎ ಇತ್ತೀಚೆಗೆ ವಿಮಾನಯಾನ ಸಂಸ್ಥೆ ಏರ್ ಇಂಡಿಯಾಗೆ 10 ಲಕ್ಷ ರೂಪಾಯಿ ದಂಡದ ಬರೆ ಹಾಕಿತ್ತು. ಇದು ಅತ್ಯಂತ ಗಂಭೀರ ಸ್ವರೂಪದ ಪ್ರಕರಣ. ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಇಂಥ ಪ್ರಕರಣಗಳಲ್ಲಿ ವಿಳಂಬ ಧೋರಣೆ ಹಾಗು ಸೂಕ್ತ ಕ್ರಮಕ್ಕೆ ಹಿಂದೇಟು ಹಾಕಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ವಿಮಾನಯಾನ ಸೇವಾ ಸಂಸ್ಥೆಗಳ ನಿಯಂತ್ರಕ ಡಿಜಿಸಿಎ ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದಷ್ಟೇ ಡಿಜಿಸಿಎ ಏರ್ ಇಂಡಿಯಾಗೆ 30 ಲಕ್ಷ ರೂಪಾಯಿ ದಂಡ ಜಡಿದಿತ್ತು. ಅಷ್ಟೇ ಅಲ್ಲ, ಪೈಲಟ್ ಪರವಾನಗಿಯನ್ನೂ ರದ್ದುಪಡಿಸಿತ್ತು.
ಇದನ್ನೂ ಓದಿ: ಮತ್ತೆ ₹10 ಲಕ್ಷ ದಂಡ ಜಡಿದ ಡಿಜಿಸಿಎ: ವಿಮಾನದಲ್ಲಿ ಮದ್ಯ ಪೂರೈಕೆ ನೀತಿಯನ್ನೇ ಬದಲಿಸಿದ ಏರ್ ಇಂಡಿಯಾ