ಕಣ್ಣೂರು (ಕೇರಳ): ಇತ್ತೀಚೆಗೆ ರಾಜ್ಯದಲ್ಲಿ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಗಳು ಹೆಚ್ಚು ಕೇಳಿ ಬರುತ್ತಿವೆ. ಇದೀಗ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 302 ಗ್ರಾಂ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಕಳ್ಳಸಾಗಾಣೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
302 ಗ್ರಾಂ ಚಿನ್ನವನ್ನು ಅತ್ಯಂತ ತೆಳುವಾದ ಪೇಸ್ಟ್ ರೂಪದಲ್ಲಿ ಮಾಡಿ, ಅದನ್ನು ಡಬಲ್ ಲೇಯರ್ ಪ್ಯಾಂಟ್ಗೆ ಹಚ್ಚಿ ಕಳ್ಳಸಾಗಾಣೆ ಮಾಡಲು ಪ್ರಯಾಣಿಕರೊಬ್ಬರು ಯತ್ನಿಸಿದ್ದರು. ಏರ್ಪೋರ್ಟ್ನಲ್ಲಿ ಏರ್ ಇಂಟೆಲಿಜೆನ್ಸ್ ಯುನಿಟ್ ತಪಾಸಣೆ ಮಾಡುವ ಸಂದರ್ಭದಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ಸದ್ಯ ವ್ಯಕ್ತಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಜುಲೈ ತಿಂಗಳಲ್ಲಿ ಇದೇ ವಿಮಾನ ನಿಲ್ದಾಣದ ಡಸ್ಟ್ಬಿನ್ನಲ್ಲಿ ಅಡಗಿಸಿಟ್ಟಿದ್ದ ಒಂದು ಕೋಟಿ ರೂ.ಮೌಲ್ಯದ ಚಿನ್ನವು ಸ್ವಚ್ಛಗೊಳಿಸುತ್ತಿದ್ದ ಸಿಬ್ಬಂದಿ ಕೈಗೆ ಸಿಕ್ಕಿತ್ತು. ಇದನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.