ನವದೆಹಲಿ : ರಷ್ಯಾದಲ್ಲಿ ಸಿಲುಕಿರುವ ಭಾರತೀಯ ಪ್ರಯಾಣಿಕರನ್ನು ಸ್ಯಾನ್ ಫ್ರಾನ್ಸಿಸ್ಕೊಗೆ ತಲುಪಿಸಲು ಏರ್ ಇಂಡಿಯಾದ ವಿಮಾನವೊಂದು ಇಂದು ಮಧ್ಯಾಹ್ನ 1 ಗಂಟೆಗೆ ಮುಂಬೈನಿಂದ ರಷ್ಯಾದ ಮಗದನ್ ಏರ್ಪೋರ್ಟ್ಗೆ ಪ್ರಯಾಣ ಬೆಳೆಸಲಿದೆ ಎಂದು ಏರ್ ಇಂಡಿಯಾದ ಪ್ರಕಟಣೆ ತಿಳಿಸಿದೆ. ಮಂಗಳವಾರ ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟಿದ್ದ ಏರ್ ಇಂಡಿಯಾದ ವಿಮಾನವೊಂದು ಎಂಜಿನ್ನಲ್ಲಿನ ತಾಂತ್ರಿಕ ತೊಂದರೆಯ ಕಾರಣದಿಂದ ರಷ್ಯಾದ ಮಗದನ್ ಏರ್ಪೋರ್ಟ್ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತ್ತು. ಹೀಗಾಗಿ ಆ ವಿಮಾನದಲ್ಲಿನ ಪ್ರಯಾಣಿಕರು ಈಗ ಮಗದನ್ ಏರ್ಪೋರ್ಟ್ನಲ್ಲಿ ಕಾಯುತ್ತಿದ್ದಾರೆ.
ಮುಂಬೈನಿಂದ ಹೊರಡಲಿರುವ ಏರ್ ಇಂಡಿಯಾ ವಿಮಾನವು ಪ್ರಯಾಣಿಕರಿಗೆ ಅಗತ್ಯವಾದ ಊಟ ಮತ್ತು ಇತರ ಸಾಮಗ್ರಿಗಳನ್ನು ಸಹ ಹೊತ್ತೊಯ್ಯಲಿದೆ. ಈ ಕುರಿತು ಪ್ರಕಟಣೆ ನೀಡಿರುವ ಏರ್ ಇಂಡಿಯಾ- ಸಹಾಯಕ ವಿಮಾನವೊಂದು ಮುಂಬೈನಿಂದ ಜೂನ್ 7ರಂದು ಮಧ್ಯಾಹ್ನ 1 ಗಂಟೆಗೆ ಹೊರಡಲಿದೆ. AI173 ಸಂಖ್ಯೆಯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರನ್ನು ಸಹಾಯಕ ವಿಮಾನವು ಸ್ಯಾನ್ ಫ್ರಾನ್ಸಿಸ್ಕೊಗೆ ತಲುಪಿಸಲಿದೆ ಎಂದು ಹೇಳಿದೆ.
216 ಪ್ರಯಾಣಿಕರು ಮತ್ತು 16 ಸಿಬ್ಬಂದಿಯಿದ್ದ ವಿಮಾನವನ್ನು ರಷ್ಯಾದ ಮಗದನ್‌ಗೆ (ಜಿಡಿಎಕ್ಸ್) ತಿರುಗಿಸಲಾಗಿತ್ತು ಮತ್ತು ಅಲ್ಲಿ ಅದು ಸುರಕ್ಷಿತವಾಗಿ ಇಳಿದಿತ್ತು. "ಏರ್ ಇಂಡಿಯಾ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಬಗ್ಗೆ ಕಾಳಜಿ ವಹಿಸುತ್ತದೆ. ಆದಷ್ಟು ಬೇಗನೆ ಸಹಾಯಕ ವಿಮಾನವನ್ನು ಕಳುಹಿಸಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಏರ್ ಇಂಡಿಯಾ ತಿಳಿಸಿದೆ.
ಮಗದನ್ ಏರ್ಪೋರ್ಟ್ನಲ್ಲಿನ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲಾಗಿದೆ ಮತ್ತು ಅವರು ಏರ್ ಇಂಡಿಯಾಗೆ ಅಗತ್ಯವಿರುವ ಎಲ್ಲ ಸಹಕಾರ ನೀಡುತ್ತಿದ್ದಾರೆ. ಅಲ್ಲಿರುವ ನಮ್ಮ ಎಲ್ಲ ಪ್ರಯಾಣಿಕ ವಾಸಕ್ಕೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದೆ. ಏರ್ ಇಂಡಿಯಾವು ದೂರದ ಮಗದನ್ ಅಥವಾ ರಷ್ಯಾದಲ್ಲಿ ಯಾವುದೇ ಸಿಬ್ಬಂದಿಯನ್ನು ಹೊಂದಿಲ್ಲದ ಕಾರಣ, ವ್ಲಾಡಿವೋಸ್ಟಾಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್, ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಭಾರತ ಸರ್ಕಾರ), ಸ್ಥಳೀಯರೊಂದಿಗಿನ ಸಂಪರ್ಕದ ಮೂಲಕ ಪ್ರಯಾಣಿಕರಿಗೆ ಎಲ್ಲ ರೀತಿಯ ನೆರವು ಒದಗಿಸಲಾಗುತ್ತಿದೆ ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ.
ಈ ಬಗ್ಗೆ ಮಾತನಾಡಿದ ಯುಎಸ್ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್, ಅಮೆರಿಕಕ್ಕೆ ಬರಬೇಕಿದ್ದ ವಿಮಾನವು ಮಂಗಳವಾರ ರಷ್ಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ವಿಷಯ ಇಲಾಖೆಗೆ ತಿಳಿದಿದೆ ಎಂದು ಹೇಳಿದ್ದಾರೆ. ಇಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಟೇಲ್, "ಅಮೆರಿಕದ ಎಷ್ಟು ನಾಗರಿಕರು ವಿಮಾನದಲ್ಲಿದ್ದರು ಎಂಬುದನ್ನು ಖಚಿತಪಡಿಸಲು ಸದ್ಯ ಸಾಧ್ಯವಾಗುತ್ತಿಲ್ಲ. ಇದು ಯುನೈಟೆಡ್ ಸ್ಟೇಟ್ಸ್‌ಗೆ ಹೊರಟಿದ್ದ ವಿಮಾನವಾಗಿದೆ. ಹಾಗಾಗಿ ಖಂಡಿತವಾಗಿಯೂ ಅದರಲ್ಲಿ ಅಮೆರಿಕದ ಪ್ರಜೆಗಳೂ ಇರಬಹುದು" ಎಂದರು.
ಏರ್ ಇಂಡಿಯಾ ಲಿಮಿಟೆಡ್ (ಏರ್ ಇಂಡಿಯಾ) ಇದು ಸರ್ಕಾರಿ ಸ್ವಾಮ್ಯದ ವಿಮಾನಯಾನ ಸೇವಾ ಕಂಪನಿಯಾಗಿದೆ. ಕಂಪನಿಯು ಪ್ರಯಾಣಿಕರು ಮತ್ತು ಸರಕು ವಾಯು ಸಾರಿಗೆ ಸೇವೆಗಳನ್ನು ಒದಗಿಸುತ್ತದೆ. ಇದು ವೈಡ್ ಬಾಡಿ, ನ್ಯಾರೋ ಬಾಡಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮತ್ತು ಅಲಯನ್ಸ್ ಏರ್ ಎಂಬ ಮೂರು ವಿಭಾಗಗಳ ಅಡಿಯಲ್ಲಿ ವ್ಯಾಪಕ ಶ್ರೇಣಿಯ ವಿಮಾನಗಳನ್ನು ನಿರ್ವಹಿಸುತ್ತದೆ.
ಇದನ್ನೂ ಓದಿ : ಭಾರತದಲ್ಲಿ ಐಡಿ ವೆರಿಫಿಕೇಶನ್ ಆರಂಭಿಸಿದ ಲಿಂಕ್ಡ್ ಇನ್