ಹೈದರಾಬಾದ್: ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಕೇಂದ್ರ ಸರ್ಕಾರವು ಇತ್ತೀಚೆಗೆ ಘೋಷಣೆ ಮಾಡಿರುವ ಅಗ್ನಿವೀರ್ ಯೋಜನೆಯ ವಿರುದ್ಧ ದೇಶಾದ್ಯಂತ ರೋಷಾಗ್ನಿಯ ಅಲೆ ಏಳುತ್ತಿರುವಂತೆ ಕಾಣಿಸುತ್ತಿದೆ. ಯೋಜನೆ ಘೋಷಣೆಯಾದಾಗಲೇ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಯೋಜನೆಯನ್ನು ವಿರೋಧಿಸಿದ್ದವು. ಇದು ಸೇನೆಗೆ ಸೇರಬಯಸುವ ಗ್ರಾಮೀಣ ಯುವಕರ ಭವಿಷ್ಯಕ್ಕೆ ಕುತ್ತು ತರಲಿದೆ ಎಂದು ಆರೋಪಿಸಿದ್ದವು. ಕೇಂದ್ರ ಸರ್ಕಾರ ಯೋಜನೆಯನ್ನು ತಕ್ಷಣವೇ ಮರುಪರಿಶೀಲಿಸಿ ಹಿಂಪಡೆಯಬೇಕೆಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಆಗ್ರಹಿಸಿದ್ದರು.
ಹರಡುತ್ತಿರುವ ರೋಷಾಗ್ನಿ: ಈಗ ಅಗ್ನಿವೀರ್ ಯೋಜನೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ, ಹಿಂಸಾಚಾರ ಹಾಗೂ ರೈಲುಗಳಿಗೆ ಬೆಂಕಿ ಹಚ್ಚುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂದು ಬೆಳಗ್ಗೆಯಿಂದಲೇ ದೇಶದ ಹಲವಾರು ಭಾಗಗಳಲ್ಲಿ ಅಗ್ನಿವೀರ್ ವಿರುದ್ಧ ಜೋರಾದ ಪ್ರತಿಭಟನೆಗಳು ನಡೆಯುತ್ತಿವೆ. ಯುವ ಸಮುದಾಯಕ್ಕೆ ಮಾರಕವಾದ ಯೋಜನೆಯನ್ನು ಹಿಂಪಡೆಯಬೇಕೆಂದು ಯುವಕರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಬಿಹಾರ್ ನಿಂದ ಹಿಡಿದು ತೆಲಂಗಾಣವರೆಗೆ ಅಗ್ನಿವೀರ್ ಹಿಂಪಡೆಯಲು ಆಗ್ರಹಿಸಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ.
ಲಾಠಿಚಾರ್ಜ್: ಹಲ್ದವಾನಿ (ಉತ್ತರಾಖಂಡ): ರಾಜ್ಯದ ಹಲ್ದವಾನಿಯಲ್ಲಿ ಅಗ್ನಿವೀರ್ ಯೋಜನೆ ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮೇಲೆ ಲಘು ಲಾಠಿ ಚಾರ್ಜ್ ಮಾಡಿ ಪೊಲೀಸರು ಚದುರಿಸಿದ್ದಾರೆ. ಲಾಠಿ ಚಾರ್ಜ್ ನಿಂದ ಕೆಲ ಯುವಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನೂ ಕೆಲ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೈಲ್ವೆ ಸ್ಟೇಷನ್ ಮೇಲೆ ದಾಳಿ :ಲಖ್ಮಿನಿಯಾ (ಬಿಹಾರ): ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಯುವಕರು ಲಖ್ಮಿನಿಯಾ ರೈಲ್ವೆ ಸ್ಟೇಷನ್ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಸ್ಟೇಷನ್ ಬಹುತೇಕ ಸುಟ್ಟು ಹೋಗಿದೆ.
ರೈಲಿಗೆ ಬೆಂಕಿ: ಸಿಕಂದರಾಬಾದ್ (ತೆಲಂಗಾಣ): ಸಿಕಂದರಾಬಾದ್ ರೈಲ್ವೆ ಸ್ಟೇಷನ್ ನಲ್ಲಿ ನಿಂತಿದ್ದ ರೈಲೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಅಲ್ಲದೆ ರೈಲ್ವೆ ಸ್ಟೇಷನ್ ಗೆ ಹಾನಿ ಮಾಡಲಾಗಿದೆ.
ಯೋಜನೆ ಹಿಂಪಡೆಯಿರಿ- ಪ್ರಿಯಾಂಕಾ ಗಾಂಧಿ: ಅಗ್ನಿಪಥ್ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೆ ತರಲಾಗಿದ್ದು, ಕೇಂದ್ರ ಸರ್ಕಾರ ತಕ್ಷಣ ಯೋಜನೆಯನ್ನು ಹಿಂಪಡೆಯಬೇಕೆಂದು ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.
ಮೂರು ಬೋಗಿಗಳು ಸುಟ್ಟು ಭಸ್ಮ: ಬಲಿಯಾ (ಉತ್ತರ ಪ್ರದೇಶ): ಅಗ್ನಿಪಥ್ ಯೋಜನೆ ಹಿಂಪಡೆಯಲು ಆಗ್ರಹಿಸಿ ಉತ್ತರ ಪ್ರದೇಶದ ಬಲಿಯಾದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಾಕಾರರು ರೈಲೊಂದಕ್ಕೆ ಬೆಂಕಿ ಹಚ್ಚಿದ್ದು, ರೈಲಿನ ಮೂರು ಬೋಗಿಗಳು ಸಂಪೂರ್ಣ ಸುಟ್ಟು ಹೋಗಿವೆ.
ಅಗ್ನಿಪಥ್ ಯೋಜನೆ ಒಳ್ಳೆಯದು -ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ : ಅಗ್ನಿಪಥ್ ಯೋಜನೆಯು ಸೂಕ್ತವಾಗಿದೆ ಎಂದು ಕಾಂಗ್ರೆಸ್ ಮುಖಂಡ ಮನೀಷ ತಿವಾರಿ ಶ್ಲಾಘಿಸಿದ್ದಾರೆ. ಸಶಸ್ತ್ರ ಪಡೆಗಳು ಉದ್ಯೋಗ ಖಾತರಿ ಯೋಜನೆಗಳಾಗಬೇಕಿಲ್ಲ ಎಂದು ಹೇಳುವ ಮೂಲಕ ಅವರು ಮೋದಿ ಸರ್ಕಾರದ ಬೆನ್ನು ತಟ್ಟಿದ್ದಾರೆ.
ಇದನ್ನು ಓದಿ:ಕೇಂದ್ರದ ಅಗ್ನಿಪಥ ಯೋಜನೆಗೆ ವಿರೋಧವೇಕೆ? ದೇಶಾದ್ಯಂತ ಪ್ರತಿಭಟನೆ ಹುಟ್ಟುಹಾಕಲು ಕಾರಣವೇನು?