ಪಾಟ್ನಾ(ಬಿಹಾರ): ಕೇಂದ್ರ ಸರ್ಕಾರದ 'ಅಗ್ನಿಪಥ' ಯೋಜನೆ ವಿರುದ್ಧ ಬಿಹಾರ ರಾಜ್ಯಾದ್ಯಂತ ಕಳೆದ ನಾಲ್ಕು ದಿನಗಳಿಂದ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 138 ಎಫ್‌ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿರುವ 716 ಜನರನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸಂಜಯ್ ಸಿಂಗ್ ತಿಳಿಸಿದ್ದಾರೆ.
ಅಲ್ಲದೇ, ಕೆಲ ಸಮಾಜಘಾತುಕ ಶಕ್ತಿಗಳು ವಿದ್ಯಾರ್ಥಿ ಗುಂಪುಗಳೊಂದಿಗೆ ಬೆರೆತು ಗಲಭೆಗಳನ್ನು ಸೃಷ್ಟಿಸುತ್ತಿವೆ. ಈ ಬಗ್ಗೆ ವಿಶೇಷ ಘಟಕ ಮತ್ತು ಗುಪ್ತಚರ ಬ್ಯೂರೋದ ಅಧಿಕಾರಿಗಳು ನಿಗಾ ವಹಿಸಿ, ಅಂತಹವರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಶನಿವಾರ ಕೂಡ ಪಾಟ್ನಾದ ಮಸೌಧಿ ಮತ್ತು ನೆರೆಯ ಜಹಾನಾಬಾದ್ ಜಿಲ್ಲೆಯಲ್ಲಿ ಹಿಂಸಾಚಾರ ನಡೆದಿದೆ. ಈ ಸಂಬಂಧ ಮಸೌದಿದಲ್ಲಿ 61 ಮತ್ತು ಜಹಾನಾಬಾದ್ನಲ್ಲಿ 50 ಜನರನ್ನು ಬಂಧಿಸಲಾಗಿದೆ. ಒಟ್ಟಾರೆ ಶನಿವಾರ ಒಂದೇ ದಿನ ರಾಜ್ಯಾದ್ಯಂತ 140 ಜನರನ್ನು ಬಂಧಿಸಿದ್ದೇವೆ ಎಂದು ವಿವರಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಮಸೌಧಿಯಲ್ಲಿ 30 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಅಲ್ಲಿ 400ಕ್ಕೂ ಹೆಚ್ಚು ಯುವಕರು ಆಗಮಿಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆಗ ತಕ್ಷಣವೇ ಪೊಲೀಸರು ಚದುರಿಸಲು ಪ್ರಯತ್ನಿಸಿದರು. ಆದರೆ, ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಭಾರಿ ಗಲಾಟೆ ಸೃಷ್ಟಿಸಿದರು. ಅಲ್ಲದೇ, ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದರು. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿ ಬಲದೊಂದಿಗೆ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಜೊತೆಗೆ ಗುರುವಾರ ಮತ್ತು ಶುಕ್ರವಾರದ ಹಿಂಸಾಚಾರಕ್ಕೆ ಹೋಲಿಸಿದರೆ, ಶನಿವಾರದ ಬಿಹಾರ ಬಂದ್‌ನಲ್ಲಿ ಪೊಲೀಸರು ಪರಿಸ್ಥಿತಿಯನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವಕರು ಮತ್ತು ಜನತೆ ವದಂತಿಗಳಿಗೆ ಕಿವಿಗೊಡಬಾರದು. ಶಾಂತವಾಗಿರಿ ಎಂದು ಬಿಹಾರದ ಯುವಕರಿಗೆ ಮನವಿ ಮಾಡುತ್ತಿದ್ದೇವೆ ಎಂದು ಎಡಿಜಿಪಿ ತಿಳಿಸಿದರು.
12 ಬಿಜೆಪಿ ನಾಯಕರಿಗೆ 'ವೈ' ಶ್ರೇಣಿ ಭದ್ರತೆ: ಹಿಂಸಾಚಾರ ಹಿನ್ನೆಲೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಬಿಹಾರದ 12 ಬಿಜೆಪಿ ನಾಯಕರಿಗೆ ಕೇಂದ್ರ ಗೃಹ ಸಚಿವಾಲಯ 'ವೈ' ಶ್ರೇಣಿ ಭದ್ರತೆ ಕಲ್ಪಿಸಿದ್ದು, ಸಿಆರ್ಪಿಎಫ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಹಿಂಸಾಚಾರದ ವೇಳೆ ಬಿಜೆಪಿ ನಾಯಕರ ಮೇಲೆ ನಿರಂತರ ದಾಳಿ ನಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕರ ಭದ್ರತೆಯನ್ನು ಹೆಚ್ಚಿಸಿದೆ. ಉಪ ಮುಖ್ಯಮಂತ್ರಿಗಳಾದ ತಾರ್ ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ, ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್, ಶಾಸಕ ಹರಿಭೂಷಣ್ ಠಾಕೂರ್ ಬಾಚೋಲ್, ದರ್ಭಾಂಗದ ಶಾಸಕ ಸಂಜಯ್ ಸರೋಗಿ, ದಿಘಾ ಕ್ಷೇತ್ರದ ಶಾಸಕ ಸಂಜೀವ್ ಚೌರಾಸಿಯಾ, ದರ್ಭಾಂಗಾ ಸಂಸದ ಗೋಪಾಲ್ ಠಾಕೂರ್, ಬಿಜೆಪಿ ಎಂಎಲ್ಸಿಗಳಾದ ಅಶೋಕ್ ಅಗರ್ವಾಲ್ ಮತ್ತು ದಿಲೀಪ್ ಜೈಸ್ವಾಲ್ ಅವರಿಗೆ 'ವೈ' ಶ್ರೇಣಿ ಭದ್ರತೆ ಸಿಕ್ಕಿದೆ.
ಇದನ್ನೂ ಓದಿ: ಶಾರ್ಪ್ ಶೂಟರ್ ಸಂತೋಷ್ ಜಾಧವ್ ಗ್ಯಾಂಗ್ನ 7 ಸದಸ್ಯರ ಬಂಧನ, 13 ಪಿಸ್ತೂಲ್ ವಶಕ್ಕೆ