ಗೋರಖ್‌ಪುರ (ಉತ್ತರ ಪ್ರದೇಶ) : ಉತ್ತರಪ್ರದೇಶ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಗೋರಖ್‌ಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಅಭ್ಯರ್ಥಿಯ ಹೆಸರನ್ನು ಸೂಚಿಸಿದೆ. ಆ ಬಳಿಕ ಕಾಂಗ್ರೆಸ್‌ನಲ್ಲಿ ರಾಜೀನಾಮೆಯ ಮಹಾಪರ್ವ ಆರಂಭವಾಗಿದೆ.
ಯೋಗಿ ಆದಿತ್ಯನಾಥ್ ವಿರುದ್ಧ ಹೊಸ ಮುಖ ಚೇತನಾ ಪಾಂಡೆ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಲು ಮುಂದಾಗಿದೆ. ಇದು, ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಿರಿಯ ಕೈ ನಾಯಕರು ಸೇರಿದಂತೆ ಅನೇಕರಲ್ಲಿ ಅಸಮಾಧಾನ ಉಂಟಾಗಲು ಕಾರಣವಾಗಿದೆ. ಹಠಾತ್ ಆಗಿ ನಾಯಕರುಗಳು ರಾಜೀನಾಮೆ ನೀಡಲು ಪ್ರಾರಂಭಿಸಿದ್ದಾರೆ.
ಕಾಂಗ್ರೆಸ್ನ ಒಟ್ಟು 28 ಮಂದಿ ಈವರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಎಲ್ಲ ನಾಯಕರುಗಳು ಟಿಕೆಟ್ ಹಂಚಿಕೆಯಿಂದ ಅಸಮಾಧಾನಗೊಂಡಿದ್ದು, ರಾಜ್ಯದ ಕಾಂಗ್ರೆಸ್ ನಾಯಕತ್ವ ನಿರ್ಲಕ್ಷ್ಯವಹಿಸಿದೆ.
ಗೋರಖ್‌ಪುರದ ಭೌಗೋಳಿಕತೆಯ ಬಗ್ಗೆ ಕಿಂಚಿತ್ತೂ ಅರಿವಿಲ್ಲದವರು ಟಿಕೆಟ್ ಹಂಚುವ ಜವಾಬ್ದಾರಿ ವಹಿಸಿಕೊಂಡರೆ ಇಂತಹ ಸಮಸ್ಯೆಗಳು ಎದುರಾಗುತ್ತವೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಾಶ ಮಾಡಲು ರಾಹುಲ್, ಪ್ರಿಯಾಂಕ ಸಾಕು ಬೇರೆ ಯಾರೂ ಬೇಕಾಗಿಲ್ಲ: ಯೋಗಿ ಆದಿತ್ಯನಾಥ್
ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಪ್ರೇಮಲತಾ ಚತುರ್ವೇದಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ನವೀನ್ ಸಿನ್ಹಾ, ರಾಜೇಶ್ ತಿವಾರಿ, ಅರವಿಂದ್ ಜೈಸ್ವಾಲ್, ಮಹಾನಗರ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ರಂಜಿತ್ ಚೌಧರಿ, ಕಾರ್ಯದರ್ಶಿ ರಂಜಿತ್ ಚೌಧರಿ, ಮಹಾನಗರ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಖಾಲಿದ್, ಅಮರ್ಜೀತ್ ಯಾದವ್, ಪಿಪ್ರಾಯಿಚ್ ವಿಧಾನಸಭಾ ಕ್ಷೇತ್ರದ ಮಾಜಿ ಅಭ್ಯರ್ಥಿ ಸೇರಿದಂತೆ 28 ಜನರು ಈವರೆಗೆ ರಾಜೀನಾಮೆ ನೀಡಿದ್ದಾರೆ.