ಕೃಷ್ಣ(ಆಂಧ್ರಪ್ರದೇಶ): ಬರೋಬ್ಬರಿ 60 ವರ್ಷಗಳ ಕಾಲ ಸಂಸಾರ ನಡೆಸಿದ್ದ ಜೋಡಿ ಸಾವಿನಲ್ಲೂ ಒಂದಾಗಿದ್ದು, ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಅರ್ಜುನ್ ರಾವ್(85), ಚಿತ್ತಮ್ಮ(80) ಸಾವಿನಲ್ಲೂ ಒಂದಾಗಿರುವ ಜೋಡಿ. ಕಳೆದ 60 ವರ್ಷಗಳ ಹಿಂದೆ ಈ ಜೋಡಿ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ. ಎಲ್ಲರೂ ಮದುವೆಯಾಗಿದ್ದು, ತಂದೆ-ತಾಯಿಯನ್ನು ನೋಡಿಕೊಳ್ಳದ ಕಾರಣ ಇವರು ಸಣ್ಣದಾದ ಗುಡಿಸಿಲಿನಲ್ಲಿ ವಾಸವಾಗಿದ್ದರು.
ಬೇರೆಯವರ ಜಮೀನಿನಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ವಾರ ಅರ್ಜುನ್ ರಾವ್ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಹೆಚ್ಚು ದಿನ ಬದುಕುವುದಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಈ ಮಾತು ಕೇಳಿರುವ ಪತ್ನಿ ಚಿತ್ತಮ್ಮ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅರ್ಜುನ್ ರಾವ್ ಕೂಡ ಪತ್ನಿ ಸಾವನ್ನಪ್ಪಿದ ಒಂದು ಗಂಟೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ. ಸ್ಥಳೀಯರು ಇವರ ಅಂತ್ಯಕ್ರಿಯೆ ನಡೆಸಿದ್ದಾಗಿ ತಿಳಿದು ಬಂದಿದೆ. ಸುಮಾರು 60 ವರ್ಷಗಳ ಕಾಲ ಜೊತೆಯಾಗಿ ಜೀವನ ನಡೆಸಿ ಕೊನೆಗೆ ಸಾವಿನಲ್ಲೂ ಒಂದಾಗಿದ್ದಾರೆ.