ಮಿಜೋರಾಂ: ರಾಜ್ಯದಲ್ಲಿ ದಿನೇದಿನೆ ಆಫ್ರಿಕನ್ ಹಂದಿಜ್ವರ ವ್ಯಾಪಿಸುತ್ತಲೇ ಇದ್ದು, ಎರಡು ತಿಂಗಳಲ್ಲಿ 4,650 ಹಂದಿಗಳು ಮೃತಪಟ್ಟಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರಿಂದಾಗಿ ರೈತರಿಗೆ 18.60 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಭಾಗದ ಜಂಟಿ ನಿರ್ದೇಶಕ ಲಾಲ್ಮಿಂಗ್ ತಂಗಾ ಹೇಳಿದ್ದಾರೆ.
ಮಾರ್ಚ್ 21 ರಂದು ಬಾಂಗ್ಲಾ ಗಡಿಯಲ್ಲಿರುವ ಲುಂಗ್ಲೆ ಜಿಲ್ಲೆಯಲ್ಲಿ ಈ ರೋಗಕ್ಕೆ ತುತ್ತಾಗಿ ಒಂದು ಹಂದಿ ಮೃತಪಟ್ಟಿತ್ತು. ಅಂದಿನಿಂದ ಈ ಕಾಯಿಲೆಯು ಐಜಾಲ್, ಲುಂಗ್ಲೆ, ಮಾಮಿತ್, ಲಾಂಗ್ಟೈ, ಹನ್ನಾಥಿಯಲ್, ಸಿಯಾಹ ಮತ್ತು ಚಂಪೈ ಸೇರಿ 9 ಜಿಲ್ಲೆಗಳಿಗೆ ಹರಡಿತು. ಕೋಲಾಸಿಬ್ ಮತ್ತು ಸೈಚುಯಲ್ ಜಿಲ್ಲೆಗಳು ಮಾತ್ರ ಎಎಸ್ಎಫ್ ಮುಕ್ತವಾಗಿವೆ ಎಂದು ತಂಗಾ ಪ್ರತಿಕ್ರಿಯಿಸಿದ್ದಾರೆ.
ಪೀಡಿತ ಜಿಲ್ಲೆಗಳ 91 ಹಳ್ಳಿಗಳನ್ನು ಎಎಸ್ಎಫ್ನ ಸೋಂಕಿತ ಪ್ರದೇಶಗಳೆಂದು ಘೋಷಿಸಲಾಗಿದೆ. 100 ಹಂದಿಗಳು ಅಸಮಾನ್ಯವಾಗಿ ಮೃತಪಟ್ಟಿದ್ದು, ಕಾರಣ ಏನೆಂದು ಪತ್ತೆ ಹಚ್ಚಲಾಗುತ್ತಿದೆ. ನೆರೆಯ ರಾಜ್ಯ ಹಾಗೂ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಹಂದಿಗಳಿಂದ ಈ ರೋಗ ವ್ಯಾಪಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಿಜೋರಾಂ ಅಸ್ಸಾಂ, ಮಣಿಪುರ ಮತ್ತು ತ್ರಿಪುರದೊಂದಿಗೆ ಅಂತರ್ರಾಜ್ಯ ಗಡಿಗಳನ್ನು ಮತ್ತು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನೊಂದಿಗೆ ಅಂತರರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿದೆ.
ಎಎಸ್ಎಫ್ ಹೆಚ್ಚು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಕಾಡು ಹಂದಿಗಳ ಮೇಲೂ ಪರಿಣಾಮ ಬೀರುತ್ತದೆ. ಇದು ಮನುಷ್ಯರಿಗೆ ಹರಡಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.