ಚಂಡೀಗಢ: ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಉದ್ಭವಿಸಿರುವ ಪರಿಸ್ಥಿತಿಯಿಂದ ಹೊಸದಾಗಿ ಭದ್ರತಾ ಪ್ರಶ್ನೆಗಳು ಎದುರಾಗಿವೆ. ಕೇಂದ್ರ ಸರ್ಕಾರ ಭಾರಿ ಅಲರ್ಟ್ ಆಗಿದ್ದು, ಎಲ್ಲವನ್ನು ಎದುರಿಸಲು ಶಕ್ತಿಯುತವಾಗಿ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆಯ ವಿಷಯದ ಕುರಿತು ಪಂಜಾಬ್ ವಿಶ್ವವಿದ್ಯಾಲಯವು ಆಯೋಜಿಸಿದ ಮೂರನೇ ಬಲರಾಮ್‌ಜಿ ದಾಸ್ ಟಂಡನ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ದೇಶದ ಗಡಿಯುದ್ದಕ್ಕೂ ರಾಷ್ಟ್ರೀಯ ವಿರೋಧಿಗಳು ಅಫ್ಘಾನ್ ಘಟನೆಗಳನ್ನು ಅಡ್ವಾಂಟೇಜ್ ಆಗಿ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದಿದ್ದಾರೆ.
ನೆರೆಯ ದೇಶದಲ್ಲಿ ಏನಾಗಿದೆ ಹಾಗೂ ಭದ್ರತೆಯ ವಿಚಾರದಲ್ಲಿ ಹೊಸದಾಗಿ ಪ್ರಶ್ನೆಗಳು ಎದುರಾಗಿವೆ. ಎಲ್ಲಾ ಬೆಳವಣಿಗೆಗಳನ್ನು ಸರ್ಕಾರ ಗಮನಿಸುತ್ತಲೇ ಇದೆ. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ನಮ್ಮ ಸರ್ಕಾರವೂ ಸವಾಲುಗಳನ್ನು ಎದುರಿಸಬೇಕಾಗಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಲರ್ಟ್ ಆಗಿದ್ದು, ಎಲ್ಲಾ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಶಕ್ತವಾಗಿದೆ ಎಂದು ತಿಳಿಸಿದ್ದಾರೆ.
ಅಫ್ಘಾನ್ ಎಲ್ಲಾ ನಗರಗಳನ್ನು ವಶಕ್ಕೆ ಪಡೆದ ಬಳಿಕ ತಾಲಿಬಾನ್‌ಗಳು ಆಗಸ್ಟ್ 15 ರಂದು ಸಂಪೂರ್ಣವಾಗಿ ಹಿಡಿತ ಸಾಧಿಸಿತ್ತು. ಎರಡು ದಶಕಗಳ ಬಳಿಕ ಅಫ್ಘಾನಿಸ್ತಾನದಿಂದ ತಮ್ಮ ಸೈನ್ಯವನ್ನು ವಾಪಸ್ ಪಡೆಯುವ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ ಎರಡೇ ವಾರಕ್ಕೆ ಈ ಬೆಳವಣಿಗೆ ನಡೆದಿತ್ತು.