ಪುಣೆ (ಮಹಾರಾಷ್ಟ್ರ): ದೇಶದಲ್ಲಿ ಒಮಿಕ್ರಾನ್ ಉಪತಳಿ ಬಿಎಫ್ 7 ಕಂಡು ಬಂದಿದ್ದು, ತುಸು ಆತಂಕ ಉಂಟು ಮಾಡಿದೆ. ಚೀನಾ, ಅಮೆರಿಕ, ಬ್ರೆಜಿಲ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೊರೊನಾ ವೈರಾಣು ತಾಂಡವವಾಡುತ್ತಿದೆ. ಸೋಂಕು ತಡೆಯಲು ಜನರಿಗೆ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸರ್ಕಾರ ಸೂಚಿಸಿದೆ. ಇದರ ಮಧ್ಯೆ ಸೀರಂ ಸಂಸ್ಥೆಯು ಕೊವೊವ್ಯಾಕ್ಸ್ ಬೂಸ್ಟರ್ ಲಸಿಕೆ ರೂಪಿಸಿದ್ದು, ಸರ್ಕಾರದ ಅನುಮತಿಗೆ ಕಾದಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ, ಕೊರೊನಾ ರೂಪಾಂತರವಾದ ಒಮಿಕ್ರಾನ್ ವಿರುದ್ಧ ಕೊವೊವ್ಯಾಕ್ಸ್ ಲಸಿಕೆ ಉತ್ತಮವಾಗಿ ಕೆಲಸ ಮಾಡಲಿದೆ. ಹೀಗಾಗಿ ಇದನ್ನು ಜನರಿಗೆ ಬೂಸ್ಟರ್ ಡೋಸ್ ಆಗಿ ನೀಡಲು ಅನುಮತಿ ಕೋರಲಾಗಿದೆ. ಸರ್ಕಾರದಿಂದ ಇನ್ನು 15 ದಿನದಲ್ಲಿ ಅನುಮೋದನೆ ಪಡೆಯಲಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಕೋವಿಶೀಲ್ಡ್ ಲಸಿಕೆಯ ಸಾಕಷ್ಟು ದಾಸ್ತಾನು ಹೊಂದಿದೆ. ಬೂಸ್ಟರ್ ಡೋಸ್ ಆಗಿ ಕೊವೊವ್ಯಾಕ್ಸ್ ಲಸಿಕೆಯನ್ನು ನೀಡಿದಲ್ಲಿ ಅದು ದೇಹದಲ್ಲಿ ಹೆಚ್ಚಿನ ಪ್ರತಿಕಾಯಗಳನ್ನು ಸೃಷ್ಟಿಸಿ ಕೊರೊನಾ ವಿರುದ್ಧ ಹೋರಾಡಲಿದೆ. ಶೀಘ್ರವೇ ಅನುಮತಿಗಾಗಿ ಕಾದಿದ್ದೇವೆ ಎಂದರು.
ವಿಶ್ವದಲ್ಲಿಯೇ ಕೊರೊನಾ ಹೆಚ್ಚಿದ್ದ ವೇಳೆ ದೇಶ ಅದನ್ನು ಸಮರ್ಥವಾಗಿ ನಿಭಾಯಿಸಿದೆ. ಆರೋಗ್ಯದ ವಿಚಾರದಲ್ಲಿ ದೇಶ ಮುಂದೆ ಇದೆ. ಲಸಿಕೆಯನ್ನು 70 ರಿಂದ 80 ದೇಶಗಳಿಗೆ ರವಾನೆ ಮಾಡಲಾಗಿದೆ. ಇದು ಸರ್ಕಾರದ ಮುಂದಾಳತ್ವದಲ್ಲಿ ನಡೆದಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ, ಆರೋಗ್ಯ ಕಾರ್ಯಕರ್ತರು, ಉತ್ಪಾದಕರು ಸೇರಿದಂತೆ ಎಲ್ಲರ ನೆರವಿನೊಂದಿಗೆ ಇದು ಸಾಧ್ಯವಾಗಿದೆ ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ ಡಾ ಪತಂಗರಾವ್ ಕದಂ ಅವರ ಜನ್ಮದಿನದ ಅಂಗವಾಗಿ ಪೂನಾವಾಲಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರಶಸ್ತಿ ವಿತರಿಸಿದರು.
ಕಾರ್ಬೆವಾಕ್ಸ್ ಬೂಸ್ಟರ್ ಪರಿಣಾಮಕಾರಿ: ಇನ್ನು ಕೆಲವು ದಿನಗಳ ಹಿಂದೆ ಬೂಸ್ಟರ್ ಡೋಸ್ ಮೇಲೆ ಅಧ್ಯಯನ ನಡೆಸಿದ್ದ ಎಐಜಿ ಆಸ್ಪತ್ರೆಗಳ ಸಂಶೋಧಕರು ಕೊರೊನಾ ಒಮಿಕ್ರಾನ್ ರೂಪಾಂತರವಾದ BF 7 ವೈರಸ್ ಅನ್ನು ಎದುರಿಸಲು ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಬೂಸ್ಟರ್ ಡೋಸ್ ಆಗಿ ಕಾರ್ಬೆವಾಕ್ಸ್ ನೀಡಬೇಕು. ಇದು ವೈರಸ್ ಅನ್ನು ಪರಿಣಾಮಕಾರಿ ಎದುರಿಸಬಲ್ಲದು. ಲಸಿಕೆ ಬದಲಿಯಿಂದ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಿತ್ತು.
2 ಡೋಸ್ ಕೋವಿಶೀಲ್ಡ್ ಪಡೆದ 250 ಆರೋಗ್ಯ ಕಾರ್ಯಕರ್ತರ ಮೇಲೆ ಈ ಪ್ರಯೋಗ ನಡೆಸಲಾಗಿತ್ತು. ಪ್ರಯೋಗದ ವೇಳೆ ಅವರು 6 ತಿಂಗಳಲ್ಲಿ ಹೆಚ್ಚಿನ ರೋಗನಿರ್ಣಯ ಶಕ್ತಿಯನ್ನು ಹೊಂದಿದ್ದರು. ಲಸಿಕೆ ವೈವಿಧ್ಯತೆಯು ಹೆಚ್ಚು ಪರಿಣಾಮ ಬೀರಲಿದೆ. ಅಧ್ಯಯನದಲ್ಲಿ ಒಳಗಾದವರು ಉತ್ತಮ ಆರೋಗ್ಯ ವೃದ್ಧಿ ತೋರಿಸಿದ್ದಾರೆ. ಮಿಶ್ರಿತ ಲಸಿಕೆಗಳು ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂಬುದನ್ನು ಅಧ್ಯಯನ ತಿಳಿಸಿತ್ತು.
ಕೋವಿಶೀಲ್ಡ್ ಪಡೆದವರು ಕಾರ್ಬೊವ್ಯಾಕ್ಸ್ ಲಸಿಕೆ ತೆಗೆದುಕೊಳ್ಳುವುದರಿಂದ ಅವರ ದೇಹದಲ್ಲಿ ಟಿ ಕೋಶಗಳು 30 ದಿನದಲ್ಲಿ ಬಹುವಾಗಿ ವೃದ್ಧಿಗೊಳ್ಳುತ್ತವೆ. ಲಸಿಕೆಯ ಪ್ರಭಾವ 90 ದಿನಕ್ಕೂ ಅಧಿಕ ಅವಧಿ ರಕ್ಷಣೆ ನೀಡುತ್ತದೆ. ಇದು ಒಮಿಕ್ರಾನ್ ಮತ್ತು ಅದರ ರೂಪಾಂತರಿ ವೈರಸ್ಗಳಿಂದ ಹೆಚ್ಚಿನ ರಕ್ಷಣೆ ನೀಡುತ್ತದೆ ಎಂದು ಅಧ್ಯಯನ ಹೇಳಿತ್ತು.
ಇದನ್ನೂ ಓದಿ: ಭಯಾನಕ ಚಳಿ: ಕಾನ್ಪುರದಲ್ಲಿ 98 ಮಂದಿ ಹೃದಯಾಘಾತದಿಂದ ಸಾವು!