ನವದೆಹಲಿ: ವ್ಯವಸ್ಥಿತವಾಗಿ ಸಂಚು ರೂಪಿಸಿ ತಮ್ಮ ಕಂಪೆನಿ ವಿರುದ್ಧ ಟ್ವಿಟರ್ನಲ್ಲಿ ನಕಲಿ ಸುದ್ದಿಗಳನ್ನು ಹರಿಬಿಡಲಾಗ್ತಿದೆ ಎಂದು ಅದಾನಿ ಸಂಸ್ಥೆ ಆರೋಪಿಸಿ, ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದೆ.
ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಗಳನ್ನು ಉತ್ತೇಜಿಸಲು ಮತ್ತು ಸ್ಥಳೀಯವಾಗಿ ಉದ್ಯೋಗಗಳನ್ನು ಸೃಷ್ಟಿಸಿ ಭಾರತವನ್ನು ಸ್ವಾವಲಂಬಿಯಾಗಿ ರೂಪಿಸುವತ್ತ ಗಮನ ಹರಿಸುತ್ತಿರುವ ಕೇಂದ್ರದ ಅಭಿಯಾನವನ್ನು ಅದಾನಿ ಗ್ರೂಪ್ಸ್ ಪ್ರಾರಂಭಿಸಿದೆ. ಹೀಗಿದ್ದರೂ ಸಹ ತಮ್ಮ ವಿರುದ್ಧ ಈ ರೀತಿಯ ನಕಲಿ ಸುದ್ದಿಗಳನ್ನು ಮಾಡಲಾಗ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಹೂಡಿಕೆ ಮಾಡಿದ ಸಾರ್ವಜನಿಕ ಹಣವನ್ನು ರಕ್ಷಿಸುವ ಸಲುವಾಗಿ ಭಾರತೀಯ ಸಂಸ್ಥೆಗಳು ಮತ್ತು ವ್ಯವಹಾರಗಳನ್ನು ಗುರಿಯಾಗಿಸಿಕೊಂಡು ಈ ಪಿತೂರಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಸಂಸ್ಥೆ ಆರೋಪಿಸಿದೆ.
ಅದಾನಿ ಗ್ರೂಪ್‌ನ ಖ್ಯಾತಿಗೆ ಧಕ್ಕೆ ತರುವ ಉದ್ದೇಶದಿಂದ ಹಲವಾರು ಟ್ವಿಟರ್ ಖಾತೆದಾರರು 'ಟ್ವಿಟರ್‌ಸ್ಟಾರ್ಮ್'ನಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಟಾಪ್ ಅದಾನಿ ಚಳವಳಿಯ ಅಡಿಯಲ್ಲಿ ಈ ರೀತಿಯ ಅಪಪ್ರಚಾರವು ಷೇರುದಾರರ ಮೌಲ್ಯದ ಮೇಲೆ ಪರಿಣಾಮ ಬೀರಬಹುದು. ಇದರ ಜೊತೆಗೆ ರಾಷ್ಟ್ರದ ಜಿಡಿಪಿ ಮತ್ತು ಉದ್ಯೋಗ ದರಗಳಿಗೆ ಯಶಸ್ವಿಯಾಗಿ ಕೊಡುಗೆ ನೀಡಿದ ಸಂಸ್ಥೆಯ ಪ್ರಗತಿಗೂ ಅಡ್ಡಿಯಾಗಬಹುದು ಎಂದು ಅದಾನಿ ಗ್ರೂಪ್ಸ್ ತಿಳಿಸಿದೆ.
ಈ ಪತ್ರವನ್ನು ಸ್ವೀಕರಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಭಾರತ ಸರ್ಕಾರ ತಿಳಿಸಿದೆ.
ಓದಿ: ಡಿಡಿಸಿ ಚುನಾವಣೆ: ಜನರನ್ನು ಮತದಾನ ಮಾಡದಂತೆ ತಡೆದ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್