ನವದೆಹಲಿ : ಇತ್ತೀಚಿನ ಹಿಂಡನ್‌ಬರ್ಗ್ ರಿಸರ್ಚ್‌ನ ವಂಚನೆ ಆರೋಪಗಳ ನಂತರ ಅದಾನಿ ಗ್ರೂಪ್ ಷೇರುಗಳ ಕುಸಿತ ಸೇರಿದಂತೆ ಷೇರು ಮಾರುಕಟ್ಟೆಗಳ ವಿವಿಧ ನಿಯಂತ್ರಕ ಅಂಶಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ ಎಂ ಸಪ್ರೆ ನೇತೃತ್ವದ ಆರು ಸದಸ್ಯರ ಸಮಿತಿ ರಚಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ. ಸಮಿತಿಯು ಪರಿಸ್ಥಿತಿಯ ಒಟ್ಟಾರೆ ಮೌಲ್ಯಮಾಪನವನ್ನು ಮಾಡುತ್ತದೆ, ಹೂಡಿಕೆದಾರರಿಗೆ ಅರಿವು ಮೂಡಿಸಲು ಮತ್ತು ಷೇರು ಮಾರುಕಟ್ಟೆಗಳಿಗೆ ಅಸ್ತಿತ್ವದಲ್ಲಿರುವ ನಿಯಂತ್ರಕ ಕ್ರಮಗಳನ್ನು ಬಲಪಡಿಸಲು ಕ್ರಮಗಳನ್ನು ಸೂಚಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರ ಪೀಠ ತಿಳಿಸಿತು.
ಸಮಿತಿಯಲ್ಲಿ ಯಾರ್ಯಾರು ಇದ್ದಾರೆ: ಎರಡು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಲಿರುವ ಸಮಿತಿಗೆ ಎಲ್ಲ ಸಹಕಾರ ನೀಡುವಂತೆ ಕೇಂದ್ರ, ಸರ್ಕಾರದ ಹಣಕಾಸು ಸಂಸ್ಥೆಗಳು ಮತ್ತು ಸೆಬಿ ಅಧ್ಯಕ್ಷರಿಗೆ ಪೀಠ ಸೂಚಿಸಿದೆ. ನಿವೃತ್ತ ನ್ಯಾಯಮೂರ್ತಿಗಳಾದ ಓಪಿ ಭಟ್ ಮತ್ತು ಜೆಪಿ ದೇವದತ್ ಕೂಡ ತನಿಖಾ ಸಮಿತಿಯಲ್ಲಿ ಇದ್ದಾರೆ. ನಂದನ್ ನಿಲೇಕಣಿ, ಕೆವಿ ಕಾಮತ್ ಮತ್ತು ಸೋಮಶೇಖರನ್ ಸುಂದರೇಶನ್ ಅವರನ್ನು ಸಮಿತಿಯ ಇತರ ಮೂವರು ಸದಸ್ಯರನ್ನಾಗಿ ನ್ಯಾಯಾಲಯ ಹೆಸರಿಸಿದೆ. ಪ್ರಸ್ತಾವಿತ ತಜ್ಞರ ಸಮಿತಿಯ ಕುರಿತು ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಸಲ್ಲಿಸಿದ್ದ ಸಲಹೆಯನ್ನು ಸ್ವೀಕರಿಸಲು ಫೆ.17 ರಂದು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು ಹಾಗೂ ಈ ವಿಚಾರದಲ್ಲಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ವಕೀಲರಾದ ಎಂ ಎಲ್ ಶರ್ಮಾ, ವಿಶಾಲ್ ತಿವಾರಿ, ಕಾಂಗ್ರೆಸ್ ಮುಖಂಡ ಜಯ ಠಾಕೂರ್ ಮತ್ತು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಮುಖೇಶ್ ಕುಮಾರ್ ಎಂಬ ವ್ಯಕ್ತಿ ಈ ವಿಷಯದ ಕುರಿತು ಇದುವರೆಗೆ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದಾರೆ. ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಸಮೂಹದ ವಿರುದ್ಧ ಮೋಸದ ವಹಿವಾಟುಗಳು ಮತ್ತು ಷೇರು ಬೆಲೆಯಲ್ಲಿ ಹಸ್ತಕ್ಷೇಪ ಸೇರಿದಂತೆ ಹಲವಾರು ಆರೋಪಗಳನ್ನು ಮಾಡಿದ ನಂತರ ಅದಾನಿ ಗ್ರೂಪ್ ಷೇರುಗಳು ಭಾರಿ ಪ್ರಮಾಣದಲ್ಲಿ ಕುಸಿದಿವೆ. ಆದರೆ, ಅದಾನಿ ಗ್ರೂಪ್ ಹಿಂಡನ್‌ಬರ್ಗ್ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದೆ. ತಾನು ಎಲ್ಲಾ ಕಾನೂನುಗಳು ಮತ್ತು ಪಾರದರ್ಶಕತೆಯ ನಿಯಮಗಳನ್ನು ಪಾಲಿಸುತ್ತಿರುವುದಾಗಿ ಅದಾನಿ ಗ್ರೂಪ್ ಹೇಳಿದೆ.
ಏರಿಕೆ ಹಾದಿಯಲ್ಲಿ ಅದಾನಿ ಷೇರುಗಳು: ಅದಾನಿ ಷೇರುಗಳ ಬೆಲೆ ಕುಸಿತದ ತನಿಖೆಗಾಗಿ ಸಮಿತಿ ರಚಿಸುವ ಸುಪ್ರೀಂಕೋರ್ಟ್ ಆದೇಶವನ್ನು ಬಿಲಿಯನೇರ್ ಗೌತಮ್ ಅದಾನಿ ಸ್ವಾಗತಿಸಿದ್ದಾರೆ. ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಆದೇಶವನ್ನು ಅದಾನಿ ಗ್ರೂಪ್ ಸ್ವಾಗತಿಸುತ್ತದೆ. ಇದು ಕಾಲಮಿತಿಯಲ್ಲಿ ಅಂತಿಮ ತೀರ್ಪನ್ನು ತರುತ್ತದೆ. ಸತ್ಯವು ಮೇಲುಗೈ ಸಾಧಿಸುತ್ತದೆ ಎಂದು 60 ವರ್ಷದ ಅಹಮದಾಬಾದ್ ಮೂಲದ ಉದ್ಯಮಿ ಅದಾನಿ ಟ್ವೀಟ್ ಮಾಡಿದ್ದಾರೆ. ನ್ಯಾಯಾಲಯ ತೀರ್ಪು ಪ್ರಕಟಿಸಿದ ನಂತರ ಎಲ್ಲ 10 ಅದಾನಿ ಷೇರುಗಳು ಏರಿಕೆಯಲ್ಲಿ ವಹಿವಾಟು ನಡೆಸುತ್ತಿವೆ ಮತ್ತು ಅವುಗಳಲ್ಲಿ ನಾಲ್ಕು ಶೇ 5 ರಷ್ಟು ಅಪ್ಪರ್ ಸರ್ಕ್ಯೂಟ್‌ಗಳಲ್ಲಿ ಲಾಕ್ ಆಗಿವೆ. ಅದಾನಿ ಎಂಟರ್‌ಪ್ರೈಸಸ್ ಷೇರು ಶೇ 2 ರಷ್ಟು ಏರಿಕೆ ಕಂಡಿದೆ.
ಇಲ್ಲಿ ಹೆಚ್ಚು ಓದಿ: ಅದಾನಿ ಗ್ರೂಪ್ ಭಾರತ ಇಸ್ರೇಲ್ ಮಧ್ಯೆ ವ್ಯಾಪಾರ ಹೆಚ್ಚಿಸಲು ಸಮರ್ಥ: ಇಸ್ರೇಲ್ ರಾಯಭಾರಿ