ಮುಂಬೈ: ಕ್ಯಾಬ್ ಚಾಲಕನೋರ್ವ ನಟಿಯೊಬ್ಬರೊಂದಿಗೆ ದುರ್ವರ್ತನೆ ತೋರಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಈ ಬಗ್ಗೆ ಖ್ಯಾತ ಮರಾಠಿ ನಟಿ ಮನ್ವಾ ನಾಯ್ಕ್ ಕ್ಯಾಬ್ನಲ್ಲಿ ತಮಗೆದುರಾದ ಘಟನೆ ಬಗ್ಗೆ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ನಟಿ ಮನ್ವಾ ನಾಯ್ಕ್ ಶನಿವಾರ ರಾತ್ರಿ ಮುಂಬೈನಲ್ಲಿ ಸ್ಥಳವೊಂದಕ್ಕೆ ತೆರಳಲು ಕ್ಯಾಬ್ ಬುಕ್ ಮಾಡಿದ್ದರು. ಬಳಿಕ ಕ್ಯಾಬ್ನಲ್ಲಿ ಹೊರಟಿದ್ದು, ಚಾಲಕ ನಿರಂತರವಾಗಿ ಫೋನ್ನಲ್ಲಿ ಮಾತನಾಡುತ್ತಲ್ಲೇ ವಾಹನ ಚಲಾಯಿಸುತ್ತಿರುವುದನ್ನು ಗಮನಿಸಿದ್ದಾರೆ. ಆಗ ಮೊಬೈಲ್ನಲ್ಲಿ ಮಾತನಾಡದಂತೆ ಆತನಿಗೆ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಚಾಲಕ ತಮ್ಮೊಂದಿಗೆ ಒರಟಾಗಿ ನಡೆದುಕೊಂಡಿದ್ದಾನೆ ಎಂದಿದ್ದಾರೆ.
ಸಿಗ್ನಲ್ ಲೆಕ್ಕಿಸದೇ ಕ್ಯಾಬ್ ಚಾಲನೆ ಮಾಡಿದ್ದಾನೆ. ಹೀಗಾಗಿ ಮಾರ್ಗಮಧ್ಯೆ ಟ್ರಾಫಿಕ್ ಪೊಲೀಸರು ಕ್ಯಾಬ್ ಚಾಲಕನನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ನನಗೆ ಬೇಗ ಹೋಗಬೇಕೆಂದು ಪೊಲೀಸರ ಬಳಿ ನಟಿ ಮನ್ವಾ ಕೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರಿಗೆ 500 ರೂಪಾಯಿ ದಂಡ ಕಟ್ಟುತ್ತೀರಾ? ಎಂದು ಕ್ಯಾಬ್ ಚಾಲಕ ನನ್ನ ಬಳಿ ಗದರಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ.
ಬಳಿಕ ಅದೇ ಕ್ಯಾಬ್ನಲ್ಲಿ ತೆರಳಿದ ನಟಿ ಕ್ಯಾಬ್ ಕಂಪನಿಯ ಸೇಫ್ಟಿ ನಂಬರ್ಗೆ ಕರೆ ಮಾಡಿದ್ದಾರೆ. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಬಳಿಕ ಕ್ಯಾಬ್ ಚಾಲಕ ಕಾರನ್ನು ಚುನಭಟ್ಟಿ ಮಾರ್ಗವಾಗಿ ಕರೆದುಕೊಂಡು ಹೋಗಲು ಯತ್ನಿಸಿದಾಗ, ಮನ್ವಾ ನಾಯ್ಕ್ ಕಾರಿನಿಂದಲೇ ಕೂಗಾಡಲು ಆರಂಭಿಸಿದ್ದಾರೆ. ಇದನ್ನು ಕಂಡ ಇಬ್ಬರು ಬೈಕ್ ಸವಾರರು ಕಾರನ್ನು ಅಡ್ಡಗಟ್ಟಿ ಅವರನ್ನು ರಕ್ಷಿಸಿದ್ದಾರೆ. ಬಳಿಕ ಕಾರಿನಿಂದ ಕೆಳಗಿಳಿದಿದ್ದಾರೆ. ಘಟನೆ ಬಗ್ಗೆ ಮನ್ವಾ ನಾಯ್ಕ್ ಟ್ವಿಟರ್ ಪೋಸ್ಟ್ ಮೂಲಕ ವಿವರಿಸಿದ್ದಾರೆ.
ಈ ಬಗ್ಗೆ ಮುಂಬೈನ ಜಂಟಿ ಪೊಲೀಸ್ ಕಮಿಷನರ್ ವಿಶ್ವಾಸ್ ನಂಗ್ರೆ ಪ್ರತಿಕ್ರಿಯಿಸಿದ್ದು, ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಪೊಲೀಸರು ಕ್ರಮ ಕೈಗೊಂಡಿದ್ದು, ಆರೋಪಿಯನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಕಮಿಷನರ್ಗೆ ನಟಿ ಮನ್ವಾ ನಾಯ್ಕ್ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ : ನೇಣಿಗೆ ಶರಣಾದ ಕಿರುತೆರೆ ನಟಿ ವೈಶಾಲಿ ಠಕ್ಕರ್.. ಅಭಿಮಾನಿಗಳಿಗೆ ಆಘಾತ