ಥಾಣೆ : ಶರದ್ ಪವಾರ್ ವಿರುದ್ಧ ವಿವಾದಾತ್ಮಕ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ನಟಿ ಕೇತ್ಕಿ ಚಿತಾಳೆ ಅವರನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಯನ್ನ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ವಿಶೇಷ ಎಂದರೆ ಕೇತ್ಕಿ ಅವರೇ ನ್ಯಾಯಾಲಯದಲ್ಲಿ ತಮ್ಮ ಪರ ತಾವೇ ವಾದ ಮಂಡಿಸಿದ್ದರು. ನ್ಯಾಯಮೂರ್ತಿ ವಿ ವಿ ರಾವ್ ಅವರ ಎದುರು ವಿಚಾರಣೆ ನಡೆಯಿತು. ತಾನು ತನ್ನನ್ನು ಸಮರ್ಥಿಸಿಕೊಳ್ಳುತ್ತೇನೆ ಎಂದು ಕೇತ್ಕಿ ನ್ಯಾಯಾಲಯಕ್ಕೆ ತಿಳಿಸಿದ್ದರು.
ನಾನು ಏನು ಹೇಳಿದ್ದೇನೋ ಅದು ನನ್ನ ಹಕ್ಕು. ನಾನು ಪೋಸ್ಟ್ ಮಾಡಿದ ಎಲ್ಲವೂ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ. ನಾನು ರಾಜಕಾರಣಿಯಲ್ಲ. ನಾನು ರಾಜಕೀಯ ನಾಯಕಿಯಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಭಾಗ. ನಮಗೆ ವಾಕ್ ಮತ್ತು ಬರವಣಿಗೆಯ ಸ್ವಾತಂತ್ರ್ಯ ಇಲ್ಲವೇ? ಎಂದು ಇಂಗ್ಲಿಷ್ನಲ್ಲಿ ವಾದ ಮಾಡಿದ್ದಾರೆ.
ಕೇತ್ಕಿ ವಿರುದ್ಧ ಥಾಣೆ ಕ್ರೈಂ ಬ್ರಾಂಚ್ ಪ್ರಕರಣ ದಾಖಲಿಸಿದ್ದು, ಕ್ರೈಂ ಬ್ರಾಂಚ್ ಅವರನ್ನು ಪೊಲೀಸ್ ಕಸ್ಟಡಿಗೆ ಕೋರಿತ್ತು. ಕೇತ್ಕಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಎನ್‌ಸಿಪಿ ಮಹಿಳಾ ಕಾರ್ಯಕರ್ತರು ನಟಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕೆಯ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ ನಡೆಸಿದರು.
ಹೆಚ್ಚಿನ ಓದಿಗೆ: ಶರದ್ ಪವಾರ್ ಬಗ್ಗೆ ವಿವಾದಾತ್ಮಕ ಪೋಸ್ಟ್: ಮರಾಠಿ ನಟಿ ಪೊಲೀಸ್ ವಶಕ್ಕೆ