ಭುವನೇಶ್ವರ್ (ಒಡಿಶಾ): ನೀಡಿದ ಭರವಸೆ ಈಡೇರಿಸದ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತನೊಬ್ಬ ಹೋರ್ಡಿಂಗ್(ದೊಡ್ಡ ಜಾಹೀರಾತು ಫಲಕ) ಹತ್ತಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. 4 ಗಂಟೆಗಳ ಕಾರ್ಯಾಚರಣೆ ಬಳಿಕ ಆತನನ್ನು ಸುರಕ್ಷಿತವಾಗಿ ಅಲ್ಲಿಂದ ಕೆಳಗಿಳಿಸಲಾಗಿದೆ.
ಒಡಿಶಾದ ಉಕ್ಕಿನನಗರಿ ರೂರ್ಕೆಲಾ ನಿವಾಸಿಗಳಿಗೆ 10 ವರ್ಷಗಳ ಹಿಂದೆ ನೀಡಲಾದ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಮುಕ್ತಿಕಾಂತ್ ಬಿಸ್ವಾಸ್ ಎಂಬುವವರು 530 ಕಿಮೀ ಪಾದಯಾತ್ರೆ ಮೂಲಕ ಭುವನೇಶ್ವರಕ್ಕೆ ತಲುಪಿದ್ದರು. ಬಳಿಕ ಈ ಬಗ್ಗೆ ಮನವಿ ಮಾಡಲು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಲು ಬಯಸಿದ್ದರು.
ಆದರೆ, ಇದಕ್ಕೆ ಅಧಿಕಾರಿಗಳು ಒಪ್ಪಿಗೆ ನೀಡಿಲ್ಲ. ಇದರಿಂದ ಕುಪಿತನಾದ ಸಾಮಾಜಿಕ ಕಾರ್ಯಕರ್ತ ಹೋರ್ಡಿಂಗ್ ಮೇಲೆ ಹತ್ತಿ ಸಿಎಂ ಭೇಟಿಗೆ ಅವಕಾಶ ನೀಡದಿದ್ದರೆ ಅಲ್ಲಿಂದ ಜಿಗಿದು ಸಾಯುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಕೆಲಹೊತ್ತು ಹೈಡ್ರಾಮಾವೇ ಸೃಷ್ಟಿಯಾಗಿತ್ತು.
4 ತಾಸು ಕಾರ್ಯಾಚರಣೆ ಬಳಿಕ ಸುಖಾಂತ್ಯ: ಕಾರ್ಯಕರ್ತನ ಆತ್ಮಹತ್ಯೆ ಬೆದರಿಕೆ ಪೊಲೀಸರನ್ನು ಚಿಂತೆಗೀಡು ಮಾಡಿತು. ಮನವೊಲಿಸುವ ಯತ್ನ ನಡೆಯದಿದ್ದಾಗ, ಕಡೆಗೆ ಅಗ್ನಿಶಾಮಕದಳ ಸಿಬ್ಬಂದಿ ಕರೆಯಿಸಿ ಸತತ 4 ಗಂಟೆಗಳ ಕಾರ್ಯಾಚರಣೆ ಬಳಿಕ ವಾಹನದ ಏಣಿ ಸಹಾಯದಿಂದ ಆತನನ್ನು ಅಲ್ಲಿಂದ ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಬಳಿಕ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮುಖ್ಯಮಂತ್ರಿಗಳು ನೀಡಿದ ಭರವಸೆ ಈಡೇರಿಸದಿದ್ದರೆ ಹೋರಾಟ ಮುಂದುವರಿಯಲಿದೆ. ಬಂಧಿಸಿದರೆ ಜೈಲಿನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ಹೇಳಿದ್ದಾರೆ.
ಓದಿ: ಕ್ಯಾಬಿನೆಟ್ ಸೇರ್ಪಡೆ ವಿಳಂಬ: ಅತೃಪ್ತ ಈಶ್ವರಪ್ಪ, ರಮೇಶ ಜಾರಕಿಹೊಳಿ ಮನವೊಲಿಕೆಗೆ ಸಿಎಂ ಕಸರತ್ತು