ಕ್ಯಾಲಿಕಟ್: ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಕ್ಯಾಲಿಕಟ್ ನಾರ್ತ್ ಬೀಚ್‌ನಲ್ಲಿ ಶಬರಿಮಲೆ ಪ್ರವೇಶಿಸಿದ ಕಾರ್ಯಕರ್ತೆ ಬಿಂದು ಅಮ್ಮಿಣಿ ಮೇಲೆ ಮತ್ತೆ ದಾಳಿ ನಡೆದಿರುವುದು ಬೆಳಕಿಗೆ ಬಂದಿದೆ. ಕೋಯಿಕ್ಕೋಡ್ ಬೀಚ್‌ನಲ್ಲಿ ಕುಡುಕನೊಬ್ಬ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವ್ಯಕ್ತಿಯನ್ನು ಮೋಹನ್‌ದಾಸ್ ಎಂದು ಗುರುತಿಸಲಾಗಿದ್ದು, ಆತ ಕ್ಯಾಲಿಕಟ್‌ನ ಬೇಪೋರ್ ಮೂಲದವನಾಗಿದ್ದಾರೆ. ಮೀನುಗಾರ, ಮದ್ಯದ ಅಮಲಿನಲ್ಲಿದ್ದ ವೇಳೆ ಹಲ್ಲೆ ಮಾಡಿದ್ದು, ಇಬ್ಬರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರರ ವಿವರವಾದ ಹೇಳಿಕೆ ಬಳಿಕ ಬಂಧನ ಸೇರಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆತನ ವಿರುದ್ಧ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೋಲೀಸರ ಪ್ರಕಾರ, ಪಾರ್ಕಿಂಗ್ ವಿಚಾರ ಹಿನ್ನೆಲೆ ಇಬ್ಬರ ಮಧ್ಯೆ ವಿವಾದ ಶುರುವಾಗಿ ಹೊಡೆದಾಟದಲ್ಲಿ ಕೊನೆಗೊಂಡಿದೆ ಎನ್ನಲಾಗುತ್ತಿದೆ. ದಾಳಿ ನಡೆಸಿದ ಯುವಕ ಸ್ಕೂಟರ್‌ನಲ್ಲಿ ಬಂದಿದ್ದನು. ದಾಳಿಯಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಥಳಿಸಿದ ವಿಡಿಯೋವನ್ನು ಸ್ವತಃ ಬಿಂದು ಅಮ್ಮಿಣಿ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಂದು ಅಮ್ಮಿಣಿ ತಮ್ಮ ಫೋನ್ ಎಸೆಯುತ್ತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದು.
ಐಪಿಸಿ ಸೆಕ್ಷನ್ 323 ಮತ್ತು 509 ಮತ್ತು ಮಹಿಳೆಯರ ಮೇಲೆ ಹಲ್ಲೆಯ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ನಡುವೆ ಪೊಲೀಸ್ ಅಧಿಕಾರಿಗಳು ಸಹಾಯ ಮಾಡಿಲ್ಲ ಎಂದು ಆರೋಪಿಸಿ ಬಿಂದು ಅಮ್ಮಿಣಿ ದೂರು ದಾಖಲಿಸಿದ್ದಾರೆ.