ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ ಹಿನ್ನೆಲೆಯಲ್ಲಿ ಪಟಾಕಿ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಕಾನೂನು ಮುರಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.
ಇಂದು ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ದೆಹಲಿ ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ಪರಿಸರ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಪಟಾಕಿ ನಿಷೇಧ ಜಾರಿಗೆ ತರಲು ಪ್ರಮಾಣಿಕವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದರು.
ಪಟಾಕಿ ನಿಷೇಧವನ್ನು ಪಾಲಿಸದವರ ವಿರುದ್ಧ ಹಾಗೂ ಸರ್ಕಾರದ ಮಾರ್ಗಸೂಚನೆಗಳನ್ನು ಮುರಿದವರಿಗೆ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆಯಡಿ 6 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸುವಂತೆ ಗೋಪಾಲ್ ರೈ ತಮ್ಮ ಆಡಳಿತ ವರ್ಗಕ್ಕೆ ತಿಳಿಸಿದ್ದಾರೆ.
ಪೊಲೀಸರು ಎಫ್‌ಐಆರ್ ಸೇರಿದಂತೆ ಪಟಾಕಿ ನಿಷೇಧವನ್ನು ಉಲ್ಲಂಘಿಸಿದವರ ಮೇಲೆ ವಾಯು ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಜರುಗಿಸಬಹುದು. ದಂಡದ ಜೊತೆಗೆ ಕನಿಷ್ಠ ಒಂದೂವರೆ ವರ್ಷ ಮತ್ತು ಗರಿಷ್ಠ ಆರು ವರ್ಷಗಳ ಜೈಲು ಶಿಕ್ಷೆಯನ್ನು ನೀಡಬಹುದು ಎಂದು ತಿಳಿಸಿದ ಸಚಿವರು, ರಾಷ್ಟ್ರೀಯ ಹಸಿರು ನ್ಯಾಯ ಮಂಡಲಿ ನೀಡಿರುವ ಆದೇಶ ಮತ್ತು ಮಾರ್ಗಸೂಚನೆಗಳ ವಿವರಣೆ ಕೊಟ್ಟರು.
ವಾಯು ಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯ ಮಂಡಲಿ (ಎನ್‌ಜಿಟಿ) ಇಂದಿನಿಂದ ನ. 30 ರವರೆಗೆ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ. ಈ ಆದೇಶ ಅಧಿಕ ಮಾಲಿನ್ಯ ದಾಖಲಾಗಿರುವ ನಗರಗಳಿಗೂ ಅನ್ವಯವಾಗಲಿದೆ.