ಮುಂಬೈ: ಕುಟುಂಬದಂತಿದ್ದ ಪಕ್ಷವನ್ನು ಅಧಿಕಾರಕ್ಕಾಗಿ ಹೋಳು ಮಾಡುವ ದೈತ್ಯರಿದ್ದಾರೆ ಎಂಬುದೇ ನನಗೆ ಆಶ್ಚರ್ಯವಾಗಿದೆ. ಪಕ್ಷದಲ್ಲಿ ಮಹತ್ವಾಕಾಂಕ್ಷಿಗಳಿದ್ದರು ಎಂಬುದು ನನಗೆ ಮತ್ತು ತಂದೆ ಉದ್ಧವ್ ಠಾಕ್ರೆ ಅವರಿಗೆ ಗೊತ್ತಿತ್ತು. ಆದರೆ, ಈ ರೀತಿಯಾಗಿ ನಡೆದುಕೊಳ್ಳುತ್ತಾರೆ ಎಂದು ಊಹಿಸಲೂ ಅಸಾಧ್ಯ ಎಂದು ಮಹಾರಾಷ್ಟ್ರ ಮಾಜಿ ಸಚಿವ ಆದಿತ್ಯ ಠಾಕ್ರೆ ಹೇಳಿದರು.
ದಂಗೆದ್ದ ಶಿವಸೇನೆಯ ಶಾಸಕರು ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಅವರು ತಮ್ಮ ಪಕ್ಷದ ಬಂಡೆದ್ದ ಶಾಸಕರ ನಡೆಗೆ ಅಚ್ಚರಿ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಟುಂಬದಿಂದಲೇ ದಂಗೆ: ಕೆಲವರು ತಮ್ಮ ಸ್ವಂತ ಹಿತಾಸಕ್ತಿಗಾಗಿ ಪಕ್ಷಕ್ಕೆ ಮತ್ತು ಕುಟುಂಬಕ್ಕೆ ಹೀಗೆ ಮಾಡುತ್ತಾರೆ ಎಂಬುದು ಊಹಿಸಲೂ ಅಸಾಧ್ಯವಾಗಿದೆ. ಉತ್ತಮವಾಗಿ ಕೆಲಸ ಮಾಡುತ್ತಿದ್ದಾಗ ಮತ್ತು ನಿಮ್ಮನ್ನು ಕುಟುಂಬವೆಂದು ಪರಿಗಣಿಸಿದವರ ವಿರುದ್ಧ ಹೀಗೆ ದಂಗೆದ್ದು ನಿಲ್ಲುವುದು ಹೇಗೆ ಸಾಧ್ಯ. ಅದನ್ನು ಪಕ್ಷ ಎಂದು ಕರೆಯಲು ಸಾಧ್ಯವೇ ಎಂದು ಆದಿತ್ಯ ಠಾಕ್ರೆ ಹೇಳಿದರು.
ಠಾಕ್ರೆ ಕುಟುಂಬ ಅಧಿಕಾರಕ್ಕಾಗಿ ಅಂಟಿಕೊಂಡಿಲ್ಲ. ಅಧಿಕಾರ, ಹಣ ಬಂದು ಹೋಗುತ್ತದೆ. ಗೌರವ, ಸ್ವಾಭಿಮಾನವನ್ನು ಎಂದಿಗೂ ಕಳೆದುಕೊಳ್ಳಬಾರದು. ಜನರ ಸೇವೆ ಮಾಡುವುದೇ ನಮ್ಮ ಕೆಲಸ. ಅದನ್ನು ಎಂದಿಗೂ ಮರೆಯಬಾರದು ಎಂದರು.
ಹಿಂದುತ್ವ ಚಿಂತನೆ ಭಿನ್ನ: ಉದ್ಧವ್ ಠಾಕ್ರೆ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುವಾಗ ಘನತೆ ಮೆರೆದಿದ್ದಾರೆ. ಉದ್ಧವ್ ಠಾಕ್ರೆ ಹಿಂದುತ್ವವನ್ನು ಕೈಬಿಟ್ಟಿದ್ದಾರೆ ಎಂಬ ಆರೋಪವನ್ನು ಬಂಡಾಯ ನಾಯಕರು ಮಾಡಿದ್ದಾರೆ. ಅದು ಸುಳ್ಳು. ನಾವು ನಂಬಿದ ಹಿಂದುತ್ವ ಸಿದ್ಧಾಂತ ಭಿನ್ನವಾಗಿದೆ. ಅದು ಬಾಲಾ ಠಾಕ್ರೆ ಅವರ ಸಿದ್ಧಾಂತವಾಗಿದೆ. ಮಹಾಆಘಾಡಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಸಿಎಂ ಉದ್ಧವ್ ಠಾಕ್ರೆ ಅವರು 2 ಬಾರಿ ಅಯೋಧ್ಯೆಗೆ ಹೋಗಿ ಬಂದಿದ್ದಾರೆ. ಮಹಾರಾಷ್ಟ್ರದಲ್ಲಿ ಕೋಮು ಸೌಹಾರ್ದತೆ ಕಾಪಾಡಲಾಗಿದೆ. ಹಾಗಾಗಿ ನಮ್ಮ ಹಿಂದುತ್ವದ ದೃಷ್ಟಿಕೋನ ವಿಭಿನ್ನವಾಗಿತ್ತು ಎಂದು ಅವರು ತಂದೆಯ ನೀತಿಗಳನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಮಹಾರಾಷ್ಟ್ರ ಮುಂದಿನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಆಯ್ಕೆ