ಛತ್ರಪುರ(ಮಧ್ಯಪ್ರದೇಶ): 13 ವರ್ಷದ ಬಾಲಕನೊಬ್ಬ ಆನ್ಲೈನ್ ಗೇಮ್ನಲ್ಲಿ 40 ಸಾವಿರ ರೂ. ಕಳೆದುಕೊಂಡಿದ್ದು, ಕೋಪದಿಂದ ತಾಯಿ ಬೈದಿದ್ದಕ್ಕಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಛತ್ರಪುರದಲ್ಲಿ ನಡೆದಿದೆ.
ಛತ್ರಪುರದ ಶಾಂತಿ ನಗರದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಬಾಲಕ ಆನ್ಲೈನ್ನಲ್ಲಿ Free Fire ಮೊಬೈಲ್ ಗೇಮ್ ಆಡಿದ್ದಾನೆ. ಈ ಗೇಮ್ ಆಡುತ್ತಿದ್ದ ಸಂದರ್ಭದಲ್ಲಿ ಹಣ ಸಂದಾಯ ಮಾಡುವಂತೆ ಸಂದೇಶ ಬಂದಿದ್ದು, ತಕ್ಷಣವೇ ತಾಯಿಯ ಅಕೌಂಟ್ ನಂಬರ್ ಹಾಕಿ, ಗೇಮ್ ಆಡಲು ಶುರು ಮಾಡಿದ್ದಾನೆ. ಈ ವೇಳೆ 40 ಸಾವಿರ ರೂ. ಕಳೆದುಕೊಂಡಿದ್ದಾನೆ.
ತಾಯಿಯ ಅಕೌಂಟ್ನಿಂದ 40 ಸಾವಿರ ರೂ. ಕಟ್ ಆಗುತ್ತಿದ್ದಂತೆ ಮಗನಿಗೆ ಫೋನ್ ಮಾಡಿ ಬೈದಿದ್ದಾಳೆ. ಇದರಿಂದ ಮನನೊಂದು, ಖಿನ್ನತೆಗೊಳಗಾಗಿರುವ ಆತ ರೂಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಈ ವೇಳೆ ಸೊಸೈಡ್ ನೋಟ್ ಬರೆದಿಟ್ಟಿದ್ದಾನೆ.
ಸೊಸೈಡ್ ನೋಟ್ ಬರೆದಿಟ್ಟ ಬಾಲಕ
ಫ್ರೀ ಫೈರ್ ಗೇಮ್ ಆಡುವುದಕ್ಕಾಗಿ 40 ಸಾವಿರ ರೂ. ಖರ್ಚು ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಸೊಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಬಾಲಕ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸದ್ಯ ಆನ್ಲೈನ್ ತರಗತಿ ನಡೆಯುತ್ತಿದ್ದ ಕಾರಣ ಆತನಿಗೆ ಮೊಬೈಲ್ ಕೊಡಿಸಲಾಗಿತ್ತು ಎಂದು ತಿಳಿದು ಬಂದಿದೆ. ಬಾಲಕನ ತಂದೆ ಲ್ಯಾಬ್ ಟೆಕ್ನಿಷಿಯನ್ ಆಗಿದ್ದು, ತಾಯಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು, ಆನ್ಲೈನ್ ಗೇಮ್ ಆಡುತ್ತಿದ್ದ ಸಂದರ್ಭದಲ್ಲಿ ಹಣಕ್ಕಾಗಿ ಯಾರಾದ್ರೂ ಬೇಡಿಕೆ ಹಾಕಿದ್ರಾ? ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.