ಯಾವತ್ಮಾಲ್(ಮಹಾರಾಷ್ಟ್ರ): 8ನೇ ತರಗತಿ ಪಾಸ್ ಮಾಡಿದ್ದ 24 ವರ್ಷದ ಮೆಕ್ಯಾನಿಕ್ ಒಬ್ಬ ಅಭಿವೃದ್ಧಿ ಪಡಿಸಿದ್ದ ಹೆಲಿಕಾಪ್ಟರ್ವೊಂದು ಪರೀಕ್ಷೆ ವೇಳೆ ಅಪಘಾತಕ್ಕೀಡಾಗಿದ್ದು, ಈ ವೇಳೆ ಮೆಕ್ಯಾನಿಕ್ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಯಾವತ್ಮಲ್ನಲ್ಲಿ ಈ ಘಟನೆ ನಡೆದಿದ್ದು, ಮೆಕ್ಯಾನಿಕ್ ಆಗಿದ್ದ ಶೇಖ್ ಇಸ್ಮಾಯಿಲ್ ಇಬ್ರಾಹಿಂ ಹೆಲಿಕಾಪ್ಟರ್ ನಿರ್ಮಾಣ ಮಾಡಿದ್ದರು. ವರ್ಕ್ಶಾಪ್ನಲ್ಲಿ ಪರಿಶೀಲನೆ ಮಾಡುತ್ತಿದ್ದಾಗ ಪರೀಕ್ಷೆ ನಡೆಸಲು ಹಾರಾಟ ನಡೆಸಲು ಮುಂದಾಗಿದ್ದಾನೆ. ಈ ವೇಳೆ, ಅದರ ಬ್ಲೇಡ್ವೊಂದು ಆತನ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.
ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈತ ಕಳೆದ ಎರಡು ವರ್ಷಗಳಿಂದ ಹೆಲಿಕಾಪ್ಟರ್ ಅಭಿವೃದ್ಧಿ ಕಾರ್ಯದಲ್ಲಿ ನಿರತನಾಗಿದ್ದನು ಎಂದು ತಿಳಿದು ಬಂದಿದೆ.
ಶೇಖ್ ಇಸ್ಮಾಯಿಲ್ ಫುಲ್ಸವಾಂಗಿ ಗ್ರಾಮದ ನಿವಾಸಿಯಾಗಿದ್ದು, 8ನೇ ತರಗತಿವರೆಗೆ ಮಾತ್ರ ಶಾಲೆ ಕಲಿತ್ತಿದ್ದಾನೆ. ಇದಾದ ಬಳಿಕ ಮೆಕ್ಯಾನಿಕ್ ಶಾಪ್ ನಡೆಸುತ್ತಿದ್ದನು. ಇದೇ ಸಂದರ್ಭದಲ್ಲಿ ಆತ ಹೆಲಿಕಾಪ್ಟರ್ ನಿರ್ಮಾಣ ಮಾಡಿದ್ದನು. ಅದಕ್ಕೆ 'ಮುನ್ನಾ ಹೆಲಿಕಾಪ್ಟರ್' ಎಂದು ನಾಮಕರಣ ಮಾಡಿದ್ದನು. ಆಗಸ್ಟ್ 15ರಂದು ಈ ಹೆಲಿಕಾಪ್ಟರ್ ಲಾಂಚ್ ಮಾಡುವ ಉದ್ದೇಶ ಇಟ್ಟುಕೊಂಡಿದ್ದನು. ಆದರೆ, ಇದಕ್ಕೂ ಮುಂಚಿತವಾಗಿ ಟೆಸ್ಟಿಂಗ್ ಮಾಡುವ ಉದ್ದೇಶದಿಂದ ವರ್ಕ್ಶಾಪ್ನಲ್ಲಿ ಭಾಗಿಯಾಗಿದ್ದ. ಈ ಸಂದರ್ಭದಲ್ಲಿ ಅದರ ಬ್ಲೇಡ್ ಆತನ ಮೇಲೆ ಬಿದ್ದು ಮೃತಪಟ್ಟಿದ್ದಾನೆ.