ಚೆನ್ನೈ (ತಮಿಳುನಾಡು): ಹೊರ ರಾಜ್ಯದಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳಾ ಪ್ರಯಾಣಿಕರೊಬ್ಬರು, ಕಸ್ಟಮ್ಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ ಘಟನೆ ನಡೆದಿದೆ. ಬುಧವಾರ ಈ ಘಟನೆ ನಡೆದಿದ್ದು ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಮಾನಯಾನ ಸಂಸ್ಥೆಯ ಒಡೆತನದ ಪಿಕ್‌ಅಪ್ ವಾಹನದಲ್ಲಿ ತಮ್ಮ ಸಾಮಗ್ರಿಗಳೊಂದಿಗೆ ಮಹಿಳೆ ಕುಳಿತಿದ್ದರು. ಅಲ್ಲಿಗೆ ಬಂದ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು, ಸಾಮಗ್ರಿಗಳ ಪರಿಶೀಲನೆಗೆ ಮುಂದಾಗಿದ್ದರು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆ, ನನ್ನ ವಸ್ತುಗಳನ್ನು ವಿನಾ ಕಾರಣ ಪರಿಶೀಲಿಸಲು ಚೆನ್ನೈ ವಿಮಾನ ನಿಲ್ದಾಣಕ್ಕೆ ಯಾವುದೇ ಅಧಿಕಾರವಿಲ್ಲ. ಪರಿಶೀಲಿಸಲು ನಾನು ಅವಕಾಶ ಮಾಡಿಕೊಡುವುದಿಲ್ಲ. ನನ್ನ ವಿರೋಧದ ಬಳಿಕವೂ ನೀವು ಪರಿಶೀಲಿಸಿದರೆ ಈ ಪಿಕ್ ಅಪ್ ವಾಹನದಿಂದ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಗೊಂದಲಕ್ಕೀಡಾದ ಅಧಿಕಾರಿಗಳು ಮಹಿಳೆಯ ಹೇಳಿಕೆಯ ಬಳಿಕವೂ ಪರಿಶೀಲನೆಗೆ ಮುಂದಾಗಿದ್ದಾರೆ. ಇದರಿಂದ ಕಸ್ಟಮ್ಸ್ ಅಧಿಕಾರಿ ಮತ್ತು ಮಹಿಳಾ ಪ್ರಯಾಣಿಕರ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾತು ಜೋರಾಗುತ್ತಿದ್ದಂತೆ ಸಹ ಪ್ರಯಾಣಿಕರು ಕೂಡ ಮಹಿಳಾ ಪ್ರಯಾಣಿಕರಿಗೆ ಬೆಂಬಲ ಸೂಚಿಸಿ ಕಸ್ಟಮ್ಸ್ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದ ನಡೆಸಿದರು.
ಕೆಲ ನಿಮಿಷಗಳ ಬಳಿಕ ಕಸ್ಟಮ್ಸ್ ಅಧಿಕಾರಿ ಮಹಿಳೆಯ ಬ್ಯಾಗ್ ಮತ್ತು ಇತರ ಸಾಮಗ್ರಿಗಳನ್ನು ಬಲವಂತವಾಗಿ ತೆಗೆದುಕೊಂಡು ಹೋಗಿ ಪರಿಶೀಲಿಸಿ, ಹಿಂದಿರುಗಿಸಿದ್ದಾರೆ. ಆದರೆ, ಈ ಘಟನೆ ಬಳಿಕ ಈ ಬಗ್ಗೆ ದೂರು ನೀಡುವುದಾಗಿ ಮಹಿಳಾ ಪ್ರಯಾಣಿಕರು ಹೇಳಿದ್ದಾರೆ.
''ಈ ವಿಡಿಯೋವನ್ನು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೆಗೆಯಲಾಗಿದೆ. ಮಹಿಳಾ ಪ್ರಯಾಣಿರೊಬ್ಬರು ಹೊರ ರಾಜ್ಯದಿಂದ ಆಗಮಿಸಿದ್ದರು. ಆದರೆ, ಅವರ ಬಳಿ ಇದ್ದ ವಸ್ತುಗಳು ಅನುಮತಿಸುವ ತೂಕಕ್ಕಿಂತ ಹೆಚ್ಚು ತೂಕವನ್ನು ಹೊಂದಿದ್ದವು. ಆದ್ದರಿಂದ, ಕಸ್ಟಮ್ಸ್ ಅಧಿಕಾರಿ ಅವರ ಲಗೇಜ್‌ನಲ್ಲಿ ಕಳ್ಳಸಾಗಣೆ ವಸ್ತುಗಳು ಇರಬಹುದು ಎಂಬ ಅನುಮಾನ ಬಂದಿದ್ದರ ಹಿನ್ನೆಲೆ ಅವರ ವಸ್ತುಗಳನ್ನು ಪರಿಶೀಲಿಸಿದ್ದಾರೆ. ಅನುಮಾನ ಬಂದರೆ ಕಸ್ಟಮ್ಸ್ ಅಧಿಕಾರಿಗಳಿಗೆ ಪರಿಶೀಲಿಸುವ ಹಕ್ಕಿದೆ. ಯಾರೇ ಆಗಲಿ ಬ್ಯಾಗ್ ಮತ್ತು ಇತರ ವಸ್ತುಗಳ ತೂಕದಲ್ಲಿ ಅನುಮಾನ ಬಂದಾಗ ಪರಿಶೀಲಿಸಲಾಗುತ್ತದೆ. ಆ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ. ಆದರೆ, ಕಸ್ಟಮ್ಸ್ ಅಧಿಕಾರಿ ಕರ್ತವ್ಯ ನಿರ್ವಹಿಸದಂತೆ ಮಹಿಳಾ ಪ್ರಯಾಣಿಕರು ತಡೆದಿದ್ದಾರೆ. ಇದರಲ್ಲಿ ಕಸ್ಟಮ್ಸ್ ಅಧಿಕಾರಿಯ ತಪ್ಪಿಲ್ಲ'' ಎಂದು ಚೆನ್ನೈ ಏರ್‌ಪೋರ್ಟ್ ಕಸ್ಟಮ್ಸ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಪ್ರಯಾಣಿಕನಿಗೆ ಹೃದಯಾಘಾತ: ಪಾಕಿಸ್ತಾನದ ಕರಾಚಿಯಲ್ಲಿ ಸ್ಪೈಸ್ಜೆಟ್ ವಿಮಾನ ತುರ್ತು ಲ್ಯಾಂಡಿಂಗ್