ಪುಣೆ (ಮಹಾರಾಷ್ಟ್ರ) : ಮದುವೆಯಾಗಲು ನಿರಾಕರಿಸಿದ ಸುಶಿಕ್ಷಿತ ಯುವತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪುಣೆಯ ಔಂಧ್ ನಲ್ಲಿ ನಡೆದಿದೆ. ಮೃತ ಯುವತಿಯನ್ನು ಸಿದ್ಧಾರ್ಥ್ ನಗರದ ಶ್ವೇತಾ ವಿಜಯ್ ರಣವಾಡೆ (26) ಗುರುತಿಸಲಾಗಿದ್ದು, ಕೊಲೆ ಮಾಡಿದ ಆರೋಪಿಯನ್ನು ರಾಜಗುರುನಗರದ ಪ್ರತೀಕ್ ಕಿಸಾನ್ ಧಾಮಲೆ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಚತುರ್ಶಿಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ : 2018ರಲ್ಲಿ ಸಂಬಂಧಿಕರೊಬ್ಬರ ಮದುವೆಯಲ್ಲಿ ಪ್ರತೀಕ್‌ಗೆ ಶ್ವೇತಾಳ ಪರಿಚಯವಾಗಿತ್ತು. ಅಲ್ಲಿ ಇಬ್ಬರೂ ಮದುವೆಯಾಗುವ ಬಗ್ಗೆ ನಿರ್ಧರಿಸಿದ್ದರು.ಆದರೆ ಪ್ರತೀಕ್ ಕೆಲವು ದಿನಗಳ ನಂತರ ಶ್ವೇತಾಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದನು ಎಂದು ಹೇಳಲಾಗಿದೆ. ಜೊತೆಗೆ ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದು, ಇದರಿಂದ ಬೇಸತ್ತ ಶ್ವೇತಾ ಆತನನ್ನು ಮದುವೆಯಾಗಲು ನಿರಾಕರಿಸಿದ್ದಳು.
ಈ ವಿಷಯವನ್ನು ತನ್ನ ಮನೆಯವರಿಗೂ ತಿಳಿಸಿದ್ದಾಳೆ. ಆದರೆ ಪ್ರತೀಕ್ ಮಾತ್ರ ಆತ್ಮಹತ್ಯೆ ಬೆದರಿಕೆ ಹಾಕುವ ಮೂಲಕ ಮತ್ತಷ್ಟು ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಎರಡು ತಿಂಗಳ ಹಿಂದೆ ಚತುರ್ಶಿಂಗಿ ಪೊಲೀಸ್ ಠಾಣೆಯಲ್ಲಿ ಶ್ವೇತಾ ದೂರು ದಾಖಲಿಸಿದ್ದಳು.
ಆದರೆ ಬುಧವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಶ್ವೇತಾ ತನ್ನ ತಾಯಿ ದೀಪಾಲಿ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಬಂದಾಗ , ಮನೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿದ್ದ ಪ್ರತೀಕ್ ಏಕಾಏಕಿ ಶ್ವೇತಾಳ ಕುತ್ತಿಗೆ, ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಶ್ವೇತಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಶ್ವೇತಾ ಸಿಎ ಓದುತ್ತಿದ್ದಳು. ಕೆಲ ದಿನಗಳ ಹಿಂದೆ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೂ ಹೋಗಿದ್ದಳು. ಆಕೆಯ ತಂದೆ ಮೂರು ವರ್ಷಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದು, ಅವಳು ತನ್ನ ತಾಯಿ ಮತ್ತು ಸಹೋದರನೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಸಿಎ ಕೋರ್ಸ್ ಮುಗಿಸಿದ ಆಕೆ ಮತ್ತೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವ ಇಚ್ಛೆ ಹೊಂದಿದ್ದಳು. ಸದ್ಯ ಶ್ವೇತಾ ಕೊಲೆ ಆರೋಪಿ ಪ್ರತೀಕ್ ಧಾಮಲೆ ಟಾಟಾ ಡ್ಯಾಮ್ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ : ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: ಐವರ ದುರ್ಮರಣ, 11 ಮಂದಿಗೆ ಗಂಭೀರ ಗಾಯ