ಕೊಲ್ಲಂ (ಕೇರಳ): ಕೇರಳದಲ್ಲಿ ಮನೆಯಿಂದ ಶುಕ್ರವಾರ ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕ ಸಮೀಪದ ರಬ್ಬರ್ ತೋಟದಲ್ಲಿ ಪತ್ತೆಯಾಗಿದ್ದಾನೆ. ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ರಬ್ಬರ್ ತೋಟಕ್ಕೆ ಬಂದ ಟ್ಯಾಪಿಂಗ್ ಕಾರ್ಮಿಕರು ಮಗುವನ್ನು ನೋಡಿದ್ದಾರೆ. ಆಗ ಕಾರ್ಮಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಮಗುವನ್ನು ಪುನಲೂರು ತಾಲೂಕು ಆಸ್ಪತ್ರೆಗೆ ರವಾನಿಸಿದರು.
ತಡಿಕ್ಕಾಡ್ ನಿವಾಸಿ ಅನ್ಸಾರಿ ಮತ್ತು ಫಾತಿಮಾ ದಂಪತಿಯ ಪುತ್ರ ಫರ್ಹಾನ್ ಶುಕ್ರವಾರ ಏಕಾಏಕಿ ನಾಪತ್ತೆಯಾಗಿದ್ದ. ಫರ್ಹಾನ್ ಕಾಣೆಯಾದ ವಿಷಯ ತಿಳಿದು ಪೊಲೀಸರು, ಶ್ವಾನದಳ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಹುಡುಕಾಟ ನಡೆಸಿದ್ದರು. ಆದರೆ, ಭಾರಿ ಮಳೆಯಿಂದಾಗಿ ತಡರಾತ್ರಿ ಶೋಧ ಕಾರ್ಯ ನಿಲ್ಲಿಸಲಾಗಿತ್ತು.
ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ರಬ್ಬರ್ ತೋಟದಲ್ಲಿ ಫರ್ಹಾನ್ ಪತ್ತೆಯಾಗಿದ್ದಾನೆ. ರಾತ್ರಿಯೆಲ್ಲ ಹುಡುಕಿದರೂ ಸಿಗದ ಫರ್ಹಾನ್ ಸಮೀಪದ ರಬ್ಬರ್ ತೋಟಕ್ಕೆ ಹೋಗಿದ್ದು ಹೇಗೆ ಎಂಬುದೇ ನಿಗೂಢವಾಗಿದೆ. ಅಲ್ಲದೇ, ರಾತ್ರಿ ಜೋರು ಮಳೆಯಲ್ಲೂ ಫರ್ಹಾನ್ ರಬ್ಬರ್ ತೋಟದಲ್ಲೇ ಉಳಿದಿದ್ದನಾ ಎಂಬ ಪ್ರಶ್ನೆಯೂ ಕಾಡುತ್ತಿದೆ.
ಸದ್ಯ ಪೊಲೀಸರು ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲು ಮುಂದಾಗಿದ್ದಾರೆ. ಫರ್ಹಾನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಪೂರ್ಣ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಮನೆಗೆಂದು ಕೂಡಿಟ್ಟ ಹಣದಲ್ಲಿ ಶಾಲೆ ಕಟ್ಟಿಸಿದ ಆದರ್ಶ ದಂಪತಿ.. ಓದಿದ ಶಾಲೆಗೆ ಹೊಸ ರೂಪ