ಆಂಧ್ರ ಪ್ರದೇಶ : ನೆಲ್ಲೂರು ಜಿಲ್ಲೆಯಲ್ಲಿ ವಿಶೇಷ ಪ್ರಕರಣ ನಡೆದಿದೆ. ಪೊಲೀಸರು ಹಿಂಬಾಲಿಸುತ್ತಿರುವುದನ್ನು ಕಂಡು ಭಯಗೊಂಡ ಟಿಪ್ಪರ್ ಲಾರಿ ಚಾಲಕನೊಬ್ಬ 3 ಕಿ.ಮೀ.ಗೂ ಹೆಚ್ಚು ದೂರ ಕಾಲುವೆಯಲ್ಲಿ ಈಜಿ ಪರಾರಿಯಾಗಲು ಯತ್ನಿಸಿದ್ದಾನೆ. 48 ಮೀಟರ್ ಅಗಲ, 2 ಮೀಟರ್ ಆಳದ, 2000 ಕ್ಯೂಸೆಕ್ ನೀರು ಹರಿಯುತ್ತಿರುವ ಕಾಲುವೆಯಲ್ಲಿ ಈಜುವ ಮೂಲಕ ಆರೋಪಿಯೊಬ್ಬ ಅಚ್ಚರಿ ಮೂಡಿಸಿದ.
ನೆಲ್ಲೂರು ಜಿಲ್ಲೆಯಲ್ಲಿ ಭಾನುವಾರ ಘಟನೆ ನಡೆದಿದೆ. ವೆಂಕಟಾಚಲಂ ಮಂಡಲದ ಇಡಿಮೇಪಲ್ಲಿಯ ಚಲ್ಲ ಕೃಷ್ಣ ಎಂಬಾತ ಟಿಪ್ಪರ್ ಲಾರಿಯೊಂದನ್ನು ವಿಂಜಮೂರಿನತ್ತ ತೆಗೆದುಕೊಂಡು ಹೋಗುತ್ತಿದ್ದ. ತಾಟಿಪರ್ತಿ ಬಳಿಯ ಪೊದಲಕೂರು ಮಂಡಲದಲ್ಲಿ ಸಂಚರಿಸುತ್ತಿದ್ದಾಗ ಮುಂದೆ ಹೋಗುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಗಾಬರಿಗೊಂಡ ಕೃಷ್ಣ, ಲಾರಿ ನಿಲ್ಲಿಸದೆ ಆತುರದಲ್ಲಿ ವೇಗವಾಗಿ ಸಂಗಮದ ಬಳಿಗೆ ವಾಹನ ಚಲಾಯಿಸಿಕೊಂಡು ಬಂದಿದ್ದಾನೆ. ಅಲ್ಲಿ ಮತ್ತೆ ಎಮ್ಮೆಗೆ ಗುದ್ದಿದ್ದಾನೆ. ಅಪಘಾತದ ಬಗ್ಗೆ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದು, ಕೂಡಲೇ ಪೊಲೀಸರು ಟ್ರಕ್ ಹಿಂಬಾಲಿಸಲು ಪ್ರಾರಂಭಿಸಿದರು.
ಇದನ್ನೂ ಓದಿ: ಲಾರಿ ಮಾಲೀಕರ ಸಂಘದಿಂದ ಕರೆ ನೀಡಲಾಗಿದ್ದ ಮುಷ್ಕರ ವಾಪಸ್
ಸಂಗಮ್ ಬ್ಯಾರೇಜ್ ಬಳಿಯ ಕನಿಗಿರಿ ಜಲಾಶಯದ ಕಾಲುವೆ ಏರಿ ಮೇಲೆ ಲಾರಿ ನಿಂತಿರುವುದನ್ನು ಗಮನಿಸಿದ ಪೊಲೀಸರು, ಬಳಿಕ ಚಾಲಕನಿಗಾಗಿ ಹುಡುಕಾಡಿದ್ದಾರೆ. ನಂತರ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿ ಈಜಲು ಪ್ರಾರಂಭಿಸಿದ್ದನ್ನು ಕಂಡು ಎಸ್‌ಎಸ್‌ಐ ಕೆ.ನಾಗಾರ್ಜುನ ರೆಡ್ಡಿ ಕಾಲುವೆಯ ಇನ್ನೊಂದು ಬದಿ ಹೋಗಿ, ಅಪಾಯದ ಬಗ್ಗೆ ಕೃಷ್ಣನಿಗೆ ಎಚ್ಚರಿಕೆ ನೀಡಿದರು. ಪೊಲೀಸರ ಧ್ವನಿ ಕೇಳುತ್ತಿದ್ದಂತೆ ಮತ್ತಷ್ಟು ಭಯಭೀತನಾದ ಆರೋಪಿ, ಇನ್ನೂ ಸ್ಪಲ್ಪ ದೂರ ಈಜಿಕೊಂಡು ಹೋಗಿ ನಂತರ ಮರದ ಕೊಂಬೆಯ ಆಸರೆ ಪಡೆದು ಸ್ವಲ್ಪ ಸಮಯ ವಿಶ್ರಮಿಸಿದನು.
ಕೃಷ್ಣನನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವುದನ್ನು ಬಿಟ್ಟು ಪೊಲೀಸರಿಗೆ ಬೇರೆ ದಾರಿಯೇ ಇರಲಿಲ್ಲ. ಬಳಿಕ, ಪೊಲೀಸರು ಮತ್ತಷ್ಟು ಎಚ್ಚೆತ್ತುಕೊಂಡು ಈಜುಗಾರರ ಸಹಾಯದಿಂದ ಆರೋಪಿಯನ್ನು ಕಾಲುವೆಯ ದಂಡೆಗೆ ಕರೆತಂದರು. ಎಷ್ಟೇ ಪ್ರಯತ್ನಿಸಿದರೂ ಕೊನೆಗೂ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದ.
ಇದನ್ನೂ ಓದಿ: ಡ್ರೈವಿಂಗ್ ನಲ್ಲಿರುವಾಗಲೇ ಚಾಲಕನಿಗೆ ಫಿಟ್ಸ್: ಪೆಟ್ರೋಲ್ ಪಂಪ್ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ
ಲಾರಿ ಚಾಲಕನಿಗೆ ಫಿಟ್ಸ್ : ಲಾರಿ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಮೂರ್ಛೆ ರೋಗ ಬಾಧಿಸಿದ ಪರಿಣಾಮ ವಾಹನದ ನಿಯಂತ್ರಣ ತಪ್ಪಿ ಪೆಟ್ರೋಲ್ ಪಂಪ್ನಲ್ಲಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಇದೇ ತಿಂಗಳ 9 ರಂದು ಬಂಟ್ವಾಳದ ಬಿ.ಸಿ ರೋಡ್ನಲ್ಲಿ ನಡೆದಿತ್ತು. ಮಂಗಳೂರಿನಿಂದ ಹಾಸನಕ್ಕೆ ಹೋಗುತ್ತಿದ್ದ ವೇಳೆ ಬಿ.ಸಿ ರೋಡಿನ ಪೆಟ್ರೋಲ್ ಪಂಪ್ ಬಳಿ ಈ ಘಟನೆ ಜರುಗಿತ್ತು. ಕೂಡಲೇ ಗಾಯಗೊಂಡ ಲಾರಿ ಚಾಲಕ ಲಕ್ಷ್ಮಣ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೊದಲು ಪೆಟ್ರೋಲ್ ಪಂಪ್ನಲ್ಲಿ ಕಾರಿಗೆ ಡಿಕ್ಕಿ ಹೊಡೆದ ಲಾರಿ ಬಳಿಕ, ಬೈಕ್ಗೆ ಬಂದು ಗುದ್ದಿದೆ. ನಂತರ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಇತರೆ ವಾಹನಗಳಿಗೂ ಸಹ ಡಿಕ್ಕಿ ಹೊಡೆದಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.