ಬದೌನ್ (ಉತ್ತರ ಪ್ರದೇಶ): ಇಲಿ ಬಾಲಕ್ಕೆ ಕಲ್ಲು ಕಟ್ಟಿ ಕಾಲುವೆಗೆ ಎಸೆದಿದ್ದರಿಂದ ಅದು ಪ್ರಾಣ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಪ್ರಾಣಿ ಪ್ರಿಯರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಇಲ್ಲಿನ ಪನ್ವಾಡಿಯ ಪ್ರದೇಶದ ನಿವಾಸಿಯೊಬ್ಬರು ಇಲಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ಇಲಿಯ ಬಾಲಕ್ಕೆ ಕಲ್ಲು ಕಟ್ಟಿ ಅದನ್ನು ಚರಂಡಿ ಎಸೆದಿದ್ದಾರೆ. ಈ ಘಟನೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಪ್ರಾಣಿ ಪ್ರೇಮಿ ವಿಕೇಂದ್ರ ಶರ್ಮಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ಮಕ್ಕಳೊಂದಿಗೆ ಸೇರಿಕೊಂಡು ಆ ವ್ಯಕ್ತಿಯ ಇಲಿಯನ್ನು ಹಿಂಸಿಸುತ್ತಿದ್ದರು. ಇದನ್ನು ನಾನು ತಡೆಯಲು ಪ್ರಯತ್ನಿಸಿದೆ. ಆದರೂ, ನನ್ನ ಮಾತನ್ನು ಲೆಕ್ಕಿಸದೇ ಕಲ್ಲು ಕಟ್ಟಿದ್ದ ಇಲಿಯನ್ನು ಕಾಲುವೆಗೆ ಎಸೆದರು. ನಂತರ ಇಲಿಯನ್ನು ಹೊರತೆಗೆಯಲು ಪ್ರಯತ್ನಿಸಿದರೂ, ಅದಾಗಲೇ ಅದು ಸತ್ತು ಹೋಗಿತ್ತು. ಆದ್ದರಿಂದ ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಕೇಂದ್ರ ಆಗ್ರಹಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯ ಉಸ್ತುವಾರಿ ಪ್ರತಿಕ್ರಿಯಿಸಿದ್ದು, ಇಲಿ ಸಾವಿನ ವಿಚಾರವಾಗಿ ದೂರು ಸ್ವೀಕರಿಸಲಾಗಿದೆ. ಅಲ್ಲದೇ, ಅದರ ಮರಣೋತ್ತರ ಪರೀಕ್ಷೆ ನಡೆಸಲು ಪಶು ವೈದ್ಯರಿಗೆ ಪತ್ರ ಬರೆಯಲಾಗಿದೆ. ಇದೇ ವೇಳೆ ಈ ವಿಚಾರವಾಗಿ ಯಾವುದೇ ಎಫ್ಐಆರ್ ಇನ್ನೂ ದಾಖಲಿಸಿಲ್ಲ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜಪ್ತಿಯಾಗಿದ್ದ 581 ಕೆಜಿಯಷ್ಟು ಗಾಂಜಾವನ್ನು ಇಲಿಗಳು ತಿಂದಿವೆ: ಕೋರ್ಟ್ಗೆ ಪೊಲೀಸರಿಂದ ವರದಿ ಸಲ್ಲಿಕೆ