ಕಾಂಚೀಪುರಂ (ತಮಿಳುನಾಡು): ತಮಿಳುನಾಡಿನ ಕಾಂಚೀಪುರಂ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಗರ್ಭಿಣಿ ಮಹಿಳೆಯೊಬ್ಬರು ದಾಖಲಾಗಿದ್ದರು. ಸಂಜೆ ಮೂತ್ರವಿಸರ್ಜನೆಗೆಂದು ಶೌಚಾಲಯಕ್ಕೆ ತೆರಳಿದ್ದ ವೇಳೆ ಹೆರಿಗೆ ನೋವು ಕಾಣಿಸಿದೆ. ಹೀಗಾಗಿ ಮಗು ಹೊಟ್ಟೆಯಿಂದ ಕೆಳಗೆ ಜಾರಿ ಶೌಚಾಲಯದ ಒಳಗೆ ಬಿದ್ದಿದ್ದು, ಬಳಿಕ ಸಾವನ್ನಪ್ಪಿದೆ. ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಗರ್ಭಿಣಿ ಮಹಿಳೆಯರ ಕುಟುಂಬಸ್ಥರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಹಿನ್ನೆಲೆ: ಕಾಂಚೀಪುರಂನ ಮಾಮಲ್ಲನ್ ನಗರದಲ್ಲಿ ವಾಸಿಸುವ ಜ್ಞಾನಶೇಖರನ್ ಎಂಬುವವರ ಪತ್ನಿ ಮುತಮಿಜ್ (22) ಎಂಬ ಗರ್ಭಿಣಿ ನಿನ್ನೆ (ಜುಲೈ 19) ಬೆಳಗ್ಗೆ ಪತಿಯೊಂದಿಗೆ ಕಾಂಚೀಪುರಂ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ವೈದ್ಯರು ಆಕೆಯನ್ನು ಪರೀಕ್ಷಿಸಿದಾಗ ಅವರಿಗೆ ತಕ್ಷಣವೇ ಹೆರಿಗೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು.
ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮುತಮಿಜ್ ಸಂಜೆ 6:30ರ ಸುಮಾರಿಗೆ ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ ತೆರಳಿದ್ದರು. ಹಾಸಿಗೆಯಿಂದ ಕೆಳಗಿಳಿದ ಗರ್ಭಿಣಿಯ ಮೇಲೆ ನಿಗಾ ಇಡಲು ಅಲ್ಲಿ ವೈದ್ಯರಾಗಲಿ, ನರ್ಸ್ಗಳಾಗಿ ಇರಲಿಲ್ಲ. ಬಳಿಕ ಮುತಮಿಜ್ ಮೂತ್ರ ವಿಸರ್ಜನೆಗೆ ಕುಳಿತಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ಮಗು ಹೊಟ್ಟೆಯಿಂದ ಕೆಳಗೆ ಬಂದು ಶೌಚಾಲಯದ ಒಳಗೆ ಬಿದ್ದಿದೆ. ಕೂಡಲೇ ಮುತಮಿಜ್ ಬೊಬ್ಬೆ ಹೊಡೆದಿದ್ದಾರೆ. ಆ ಬಳಿಕ ನರ್ಸ್ಗಳು ಬಂದು ಮಗುವನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: ನಡು ರಸ್ತೆಯಲ್ಲೇ ಆಂಬ್ಯುಲೆನ್ಸ್ ನಿಲ್ಲಿಸಿ ಗರ್ಭಿಣಿಗೆ ಹೆರಿಗೆ ಮಾಡಿಸಿದ ಅರೆ ವೈದ್ಯಕೀಯ ಸಿಬ್ಬಂದಿ: ಪ್ರಶಂಸೆ
ಆ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು ಇಲ್ಲದ ಕಾರಣ ಚಿಕಿತ್ಸೆಗಾಗಿ ಮಗುವನ್ನು ಚೆಂಗಲಪಟ್ಟು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲು ನಿರ್ಧರಿಸಿ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಎಲ್ಲ ವೈದ್ಯಕೀಯ ಉಪಕರಣಗಳಿರುವ ಆಂಬ್ಯುಲೆನ್ಸ್ ತಡವಾಗಿ ಬಂದಿದೆ. ನಂತರ ಮಗುವನ್ನು ಚೆಂಗಲಪಟ್ಟು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಮಗುವು ಕಾಂಚೀಪುರಂನಿಂದ ಸುಮಾರು 10 ಕಿಲೋಮೀಟರ್ ಪ್ರಯಾಣಿಸಿದ ನಂತರ ಮಾರ್ಗಮಧ್ಯೆ ಸಾವನ್ನಪ್ಪಿದೆ.
ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಮುತಮಿಜ್ ಅವರ ಪತಿ ಜ್ಞಾನಶೇಖರ್ ಮತ್ತು ಸಂಬಂಧಿಕರು ಕಾಂಚೀಪುರಂ ಸರ್ಕಾರಿ ಆಸ್ಪತ್ರೆಯ ವೈದ್ಯರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾತುಕತೆ ನಡೆಸಿದರು. ಮಗುವಿನ ಶವವನ್ನು ಮನೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್ ಸೇರಿದಂತೆ ಯಾವುದೇ ಸಹಾಯ ಬೇಕಾಗಿಲ್ಲ ಎಂದು ಜ್ಞಾನಶೇಖರನ್ ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ ಮೃತ ಮಗುವನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
ಕಾಂಚೀಪುರಂ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿದಿನ ಸುಮಾರು 20 ಗರ್ಭಿಣಿಯರು ಹೆರಿಗೆಗೆ ದಾಖಲಾಗುತ್ತಾರೆ. ಐದು ಅಂತಸ್ತಿನ ಹೆರಿಗೆ ವಾರ್ಡ್‌ನಲ್ಲಿ ವೈದ್ಯರು ಮತ್ತು ನರ್ಸ್‌ಗಳ ಕೊರತೆ ಬಹಳ ಹಿಂದಿನಿಂದಲೂ ಇದೆ. ಹೆರಿಗೆಯ ಸಮಯದಲ್ಲಿ ಪರಿಚಾರಕರು ಗರ್ಭಿಣಿಯರೊಂದಿಗೆ ಇರಬೇಕು. ಆದರೆ ಈ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಕೈ ತುಂಬಾ ಹಣ ನೀಡುವ ವಾರ್ಡ್ಗಳಿಗೆ ಮಾತ್ರ ಹೋಗುತ್ತಿರುವ ಇಂತಹ ದುರಂತಗಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹದಿಂದ ಗರ್ಭಿಣಿ ಆತ್ಮಹತ್ಯೆ ಯತ್ನ: ಒಂದು ದಿನದ ಹೆಣ್ಣು ಮಗು ಸಾವು